ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈಗಾಗಲೇ 6 ರಿಂದ ಮೇಲಿನ ಶಾಲಾ ಹಾಗೂ ಕಾಲೇಜು ತರಗತಿಗಳನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನೋಡಿದರೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಜೊತೆಗೆ ಜನ ಕೂಡಾ ಮುನ್ನೆಚ್ಚರಿಕೆಯನ್ನು ಮರೆತು ಸುತ್ತಾಡುತ್ತಿದ್ದಾರೆ. ಹೀಗಾಗಿ ಮೂರನೇ ಅಲೆಯ ಭೀತಿಯೂ ಹೆಚ್ಚಾಗುತ್ತಿದೆ.
ಈ ನಡುವೆ 6 ರಿಂದ 12 ತರಗತಿ ತನಕದ ಭೌತಿಕ ತರಗತಿಗಳನ್ನು ಫುಲ್ ಡೇ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಈ ಬಗ್ಗೆ ಮೌಖಿಕ ಆದೇಶ ಹೊರಡಿಸಲಾಗಿದ್ದು, ಶಾಲೆಗಳು ಫುಲ್ ಡೇ ತರಗತಿ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಬಹುದಾಗಿದೆ.
ಇದಕ್ಕೆ ಪೂರಕವಾಗಿ ಇದೀಗ ಕೊರೋನಾ ಸೋಂಕಿನ ಕಾರಣದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮತ್ತೆ ಪ್ರಾರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ಜಂಟಿ ನಿರ್ದೇಶಕರಾದ ಟಿ.ನಾರಾಯಣಗೌಡ ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದು ನವೆಂಬರ್ 1 ರಿಂದ ಮತ್ತೆ ಬಿಸಿಯೂಟ ಪ್ರಾರಂಭಿಸಲು ಸಿದ್ದತೆ ನಡೆಸುವಂತೆ ಸೂಚಿಸಿದ್ದಾರೆ.
ಇದಕ್ಕಾಗಿ ಮಾರ್ಗಸೂಚಿಯನ್ನು ಕೂಡಾ ನೀಡಲಾಗಿದ್ದು 2020ರ ಮಾರ್ಚ್ 14ರಿಂದ ಶಾಲೆಯ ಬಿಸಿಯೂಟ ಮತ್ತು ಬಿಸಿ ಹಾಲು ವಿತರಣೆ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಇದನ್ನು ಮತ್ತೆ 2021 ನವೆಂಬರ್ 1 ರಿಂದ ಪ್ರಾರಂಭಿಸಬೇಕು. ಹೀಗಾಗಿ 1 ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಬಿಸಿಯೂಟವನ್ನು ಪ್ರಾರಂಭಿಸುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಬೇಕಾಗಿದೆ. ಹೀಗಾಗಿ ಅನುಸರಿಸಬೇಕಾದ ಕರಡು ಪ್ರಸ್ತಾವನೆಗೆ ಅಭಿಪ್ರಾಯ ಸಲಹೆ ನೀಡುವಂತೆ ಉಪಹಾರ ಯೋಜನೆಯ ಜಂಟಿ ನಿರ್ದೇಶಕರು ಶಿಕ್ಷಣಾಧಿಕಾರಿಗಳಿಂದ ಸಲಹೆ ಕೇಳಿದ್ದಾರೆ.
ಈಗಿನ ಯೋಚನೆ ಪ್ರಕಾರ ನವಂಬರ್ 1 ಕನ್ನಡ ರಾಜ್ಯೋತ್ಸವ ದಿನದಂದು ಸಿಹಿ ವಿತರಣೆಯೊಂದಿಗೆ ಸಂಭ್ರಮದಿಂದ ಮತ್ತೆ ಬಿಸಿಯೂಟ ವಿತರಣೆ ಪ್ರಾರಂಭಿಸಬೇಕು. ಹಬ್ಬದ ರೀತಿಯಲ್ಲಿ ಇದಕ್ಕೆ ಚಾಲನೆ ನೀಡಬೇಕು ಅನ್ನುವುದು ಸರ್ಕಾರದ ನಿರ್ಧಾರ.
Discussion about this post