ಅಡುಗೆ ಮನೆ ಸಹವಾಸ ಸಾಕಾಯ್ತು.ಇದು ಪ್ರತಿಯೊಂದು ಮನೆಯ ಗೃಹಿಣಿ ಹೇಳುವ ಮಾತು. ನಿಮ್ಮ ಅಜ್ಜಿಯಿಂದ ಹಿಡಿದು ತಾಯಿ, ಅಕ್ಕ,ತಂಗಿ ಹೀಗೆ ಯಾರನ್ನಾದ್ರೂ ಕೇಳಿ ಅಡುಗೆ ಕೆಲಸವಂದ್ರೆ ಇಷ್ಟ ಅನ್ನುವ ಅವರು ಗಂಡ ಅಡುಗೆ ಕೆಲಸದಲ್ಲಿ ಸಹಾಯ ಮಾಡುವುದಿಲ್ಲ ಅನ್ನುವ ಆರೋಪವೊಂದನ್ನು ಮುಂದಿಡುತ್ತಾರೆ.ಹಳ್ಳಿಯೋ ಸಿಟಿಯೋ ಪ್ರತೀ ಮನೆಯ ಗೃಹಿಣಿಗೆ ಗಂಡನ ಮೇಲೆ ಬೆಟ್ಟದಷ್ಚು ಪ್ರೀತಿಯಿದ್ರು ಅಡುಗೆ ವಿಚಾರದಲ್ಲಿ ಮಾತ್ರ ಕೋಪ ಖಂಡಿತಾ.
ಅದರಲ್ಲೂ ಕೆಲಸ ಮಾಡುವ ಮಹಿಳೆಯರು ಗಂಡ ಅಡುಗೆ ವಿಚಾರದಲ್ಲಿ ಸಹಾಯ ಮಾಡಬೇಕು ಎಂದು ಬಯಸುತ್ತಾರೆ.ಕಾಲೇಜು ಹುಡುಗಿಯರನ್ನ ಕೇಳಿ ನೋಡಿ ನಿಮ್ಮ ಗಂಡನಿಂದ ಎನ್ ಬಯಸುತ್ತೀರಿ ಎಂದು, ಚಿನ್ನ ಒಡವೆ, ಕೇರ್, ಪ್ರೀತಿ ಎಂದೆಲ್ಲಾ ಹೇಳಿ ಅಡುಗೆ ಕೆಲಸಕ್ಕೆ ಒಂದಿಷ್ಟು ಸಹಾಯ ಮಾಡುವಂತೆ ಇರಬೇಕು ಎಂದು ಮಾತು ನಿಲ್ಲಿಸುತ್ತಾರೆ.
ಗಂಡಸರೇ ನಿಮಗೊಂದು ಸವಾಲ್
ಈ ಪ್ರಶ್ನೆಯನ್ನು ಗಂಡಂದಿರಿಗೆ ಕೇಳ ಬಯಸುತ್ತೇನೆ. ನಿಮ್ಮ ಹೆಂಡತಿಯ ಅಡುಗೆ ಚೆನ್ನಾಗಿಲ್ಲ ಎಂದು ಒಂದಲ್ಲ ಒಂದು ದಿನ ಹೇಳಿರುತ್ತೀರಿ ತಾನೇ? ಖಂಡಿತಾ ಹೇಳಿರುತ್ತೀರಿ. ಉಪ್ಪು,ಖಾರ, ಹುಳಿ ಬಗ್ಗೆ ದೂರಿರುತ್ತೀರಿ. ಹಾಗಂತ ಅವರೇನಾದ್ರೂ ನಿಮ್ಮ ಮೇಲಿನ ಕೋಪದಿಂದ ಅಡುಗೆಯನ್ನು ಟೇಸ್ಟ್ ಲೆಸ್ ಮಾಡಿರುತ್ತಾರೆಯೇ ಖಂಡಿತಾ ಇಲ್ಲ. ಪಾಪ ಎನೋ ಸುಸ್ತು. ಒಂದಿಷ್ಟು ಎಡವಟ್ಟು ಆಗಿರುತ್ತದೆ.
ಹೆಂಡತಿಯ ಅಡುಗೆಯನ್ನು ಟೀಕಿಸುವ ನೀವು ಒಂದ್ಸಲ ಕಿಚನ್ ಗೆ ಹೋಗಿ. ನಿಮ್ಮ ಉತ್ತರ ಏನು ಇರುತ್ತೆ ಗೊತ್ತಾ? ಅಯ್ಯೋ ಈಗೇನು ಅಡುಗೆ ಸುಲಭ. ಗ್ಯಾಸ್ ಇದೆ, ಕುಕ್ಕರಿದೆ, ಕಟ್ಟರ್ ಇದೆ. ನಮ್ಮ ಅಮ್ಮ, ಅಜ್ಜಿ ಹೊಗೆ ಒಲೆ ಮುಂದೆ ಕೂತಿರುತ್ತಿದ್ದರು. ಬೀಸೋ ಕಲ್ಲು ಮುಂದೆ ಸುಸ್ತಾಗುತ್ತಿದ್ದರು ಅನ್ನುತ್ತೀರಿ. ಹೌದು ಕಾಲ ಬದಲಾಗಿದೆ. ಆದ್ರೆ ಈರುಳ್ಳಿ ಕಣ್ಣೀರು ತರಿಸುತ್ತದೆ. ಹಸಿ ಮೆಣಸು ಖಾರವಾಗಿಯೇ ಇರುತ್ತದೆ. ಹಾಗಾಗಿ ಅಡುಗೆ ಮನೆಯೊಳಗಿನ ಮಹಿಳೆಯ ಸಂಕಷ್ಟ ಕಡಿಮೆಯಾಗಿಲ್ಲ.
ನೀವ್ಯಾಕೆ ಅಡುಗೆ ಭಟ್ಟರಾಗಬಾರದು?
ಸ್ಟಾರ್ ಹೋಟೇಲ್ ಗೆ ಹೋಗಿ,ಯಾವುದೋ ಪುಟ್ಟ ಹೊಟೇಲ್ ಗೆ ಹೋಗಿ ಅಲ್ಲಿ ಅಡುಗೆ ಮಾಡುವವರು ಗಂಡಸರು.ಆದ್ರೆ ಮನೆಗೆ ಬಂದ್ರೆ ಗಂಡಸರು ಅಡುಗೆ ಮಾಡುವುದಿಲ್ಲ. ಹೀಗಾಗಿ ನಿಮ್ಮದು ಕೆಲಸ ಮಾಡುವ ಕುಟುಂಬವಾಗಿದ್ದರೆ ಕಚೇರಿಯಿಂದ ಬೇಗ ಬಂದ ದಿನ ಅಡುಗೆ ಮಾಡಿ ತೋರಿಸಿ.ಉಪ್ಪು,ಖಾರ ಹುಳಿ ಯಾವುದರ ಬಗ್ಗೆಯೂ ವರಿ ಮಾಡ್ಕೋಬೇಡಿ. ಹೆಂಡತಿ ಕಚೇರಿಯಿಂದ ಬರುವಷ್ಟು ಹೊತ್ತಿಗೆ ಅಡುಗೆ ರೆಡಿ ಇದ್ರೆ ನಿಮಗೆ ಸಿಗುವ ರೆಸ್ಪಾನ್ ನೋಡಿ.ನಿಮಗೆ ಗಿಲ್ಟಿ ಫಿಲಿಂಗ್ ಬಾರದಿದ್ರೆ ಹೇಳಿ.
ಹಾಗಂತ ಪ್ರತೀ ನಿತ್ಯ ಕೆಟ್ಟ ಅಡುಗೆ ಮಾಡಿಡಲು ಹೋಗಬೇಡಿ.ದಿನದಿಂದ ದಿನಕ್ಕೆ ಅಡುಗೆಯ ಕ್ವಾಲಿಟಿಯನ್ನು IMPROVE ಮಾಡಿ.ಇದು ಕಷ್ಟವಾದ್ರೆ ವಾರಕ್ಕೊಂದು ರಜೆ ಇರುತ್ತೆ ತಾನೇ ನಿಮಗೆ.ಆ ದಿನ ಅಡುಗೆ ಮನೆ ಉಸ್ತುವಾರಿಯನ್ನು ನೀವು ವಹಿಸಿಕೊಳ್ಳಿ.ಈ ಗಂಡಸರಿಗೊಂದು ಕೆಟ್ಟ ಚಾಳಿ ಇದೆ.ಹೆಂಡತಿ ಅಡುಗೆ ಮಾಡಿಲ್ಲ ಅಂದ್ರೆ ಹೊಟೇಲ್ ನಿಂದ ಪಾರ್ಸೆಲ್ ತಂದು ಬಿಡೋದು.
ನಿಮ್ಮಿಬ್ಬರ ವಾರದ ರಜೆಯ ದಿನ ಒಂದಿಷ್ಟು ಬೇಗ ಎದ್ದು ಬೆಳಗಿನ ತಿಂಡಿಯನ್ನು ತಯಾರಿಸಿ. ಸುಲಭವಾಗಿ ತಯಾರಿಸಬಹುದಾದ ರೆಸಿಪಿಗಳು ಇಂಟರ್ ನೆಟ್ ನಲ್ಲಿ ಬೇಜಾನ್ ಸಿಗುತ್ತದೆ. ಮಧ್ಯಾಹ್ನ ಊಟ ತಯಾರಿಸಬೇಕು ಅನ್ನುವಷ್ಟು ಹೊತ್ತಿಗೆ ನಿಮ್ಮ ಪತ್ನಿಯೇ ನಿಮ್ಮ ಕೆಲಸಕ್ಕೆ ಕೈ ಜೋಡಿಸುತ್ತಾಳೆ.ಈ ಅಡುಗೆ ರುಚಿಯನ್ನು ಸವಿದು ನೋಡಿ.ಕೆಟ್ಟದಾಗಿರಲು ಸಾಧ್ಯವೇ ಇಲ್ಲ ಬಿಡಿ.
ಖಂಡಿತಾ ಹೌದು ಅಯ್ಯೋ ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದು ನೀವು ನಿರಾಕರಿಸುತ್ತೀರಿ. ವಾರಕ್ಕೊಂದು ರಜೆ.ಪುಲ್ ರೆಸ್ಟ್ ಮಾಡದಿದ್ರೆ ಹೇಗೆ ಎಂದು ನೀವು ಪ್ರಶ್ನೆ ಮಾಡುತ್ತೀರಿ. ಅರೇ ಹಾಗಂತ ನಿಮ್ಮ ಹೆಂಡತಿಗೆ ನೀವು ಹೆಲ್ಪ್ ಮಾಡದಿದ್ರೆ ಹೇಗೆ ಸ್ವಾಮಿ. ಇವೆರೆಡೂ ಸಾಧ್ಯವಿಲ್ಲ ಅನ್ನುವುದಾದ್ರೆ. ನಿತ್ಯ ನಿಮ್ಮ ಹೆಂಡತಿಗೆ ನೀವು ಕಿಚನ್ ನಲ್ಲಿ ಸಹಾಯ ಮಾಡಬಹುದು. ಒಂದು ದಿನ ಸಹಾಯ ಮಾಡಿ ನೋಡಿ. ಬೆಡ್ ರೂಂ ನಲ್ಲಿ What a romantic day ಎಂದು ನಿಮ್ಮ ಪತ್ನಿ ಹೇಳದಿದ್ರೆ ಆಮೇಲೆ ಹೇಳಿ.
ನಿತ್ಯ ನೀವೇನೂ ಕಿಚನ್ ನಲ್ಲಿ ಬೆಟ್ಟ ಅಗೆಯಬೇಕಾಗಿಲ್ಲ. ಚಿಕ್ಕ ಪುಟ್ಟ ಪಾತ್ರೆ ತೊಳೆಯಿರಿ, ತರ್ಕಾರಿಗಳನ್ನು ಕಟ್ ಮಾಡಿ ಕೊಡಿ. ಅಡುಗೆಯ ಟೇಸ್ಟ್ ನೋಡಿ ಏನು ಮಾಡಿದ್ರೆ ಚೆನ್ನಾಗಿರುತ್ತೆ ಅಂತಾ ಹೇಳಿ. ತಟ್ಟೆಗೆ ಬಡಿಸಿದ ಮೇಲೆ ನೀವು ಅಪ್ ಸೆಟ್ ಆಗುವುದು ತಪ್ಪುತ್ತದೆ. ನಿಮ್ಮ ಪತ್ನಿಯ ಇಷ್ಟದ ಸೀರಿಯಲ್ ಮಿಸ್ಸ್ ಆಗುವುದು ತಪ್ಪುತ್ತದೆ.
ಹೋಗ್ಲಿ ಇವ್ಯಾವುದನ್ನು ಮಾಡಲು ಸಾಧ್ಯವಿಲ್ಲ ಅನ್ನುವುದಾದ್ರೆ ಕನಿಷ್ಟ ಪಕ್ಷ ಬೇಯಿಸಿದ ಅಡುಗೆಯನ್ನು ತಟ್ಟೆಗೆ ಬಳಸಿಕೊಂಡು ಜೊತೆಗೆ ತಿನ್ನಿ. ನಿಮ್ಮ ಕೈಯಾರೆ ನಿಮ್ಮ ಪತ್ನಿ ತಟ್ಟೆಗೆ ಬಡಿಸಿ.
ನೀವು ಅಡುಗೆ ಮನೆಗೆ ಹೋಗುವುದನ್ನು ರೂಢಿಸಿಕೊಂಡ್ರೆ ಎನೆಲ್ಲಾ ಅನುಕೂಲಗಳಿದೆ ಗೊತ್ತಾ?
- ನಿಮ್ಮ ಸಂಸಾರದ ಸರಿಗಮ ಸರಿಯಾಗಿರುತ್ತದೆ. ಸಂಸಾರದಲ್ಲಿ ಸಾರವಿರುತ್ತದೆ
- ನಿಮ್ಮ ಹೆಂಡತಿ ಮುನಿಸಿಕೊಂಡ್ರೆ ಆಕೆಯನ್ನು ಸಮಾಧಾನಗೊಳಿಸಲು ಅಡುಗೆ ಐಡಿಯಾ ಸೂಪರ್
- ಇನ್ನು ನಿಮಗೆ ಶಾಲೆಗೆ ಹೋಗುವ ಪುಟಾಣಿ ಇದ್ರೆ ಅಂತು ಕಷ್ಟ ಹೇಳುವುದು ಬೇಡ. ಅಂತಹ ಸಂದರ್ಭದಲ್ಲಿ ಮನೆ ಕೆಲಸದಾಕೆ ಬಾರದೇ ಹೋದ್ರೂ ನೀವು ಚಿಂತಿಸಬೇಕಾಗಿರುವುದಿಲ್ಲ.
ಇವೆಲ್ಲಾ ಗಂಡಸರಿಗಾಯ್ತು. ಇದನ್ನು ಓದಿದ ಗೃಹಿಣಿಯರು ಅಯ್ಯೋ ನಮ್ಮ ಮನೆಯವರು ಕಿಚನ್ ಕಡೆ ಮುಖ ಮಾಡಿ ಮಲಗಲ್ಲ ಅಂತೀರಿ. ಅರೇ ಅದಕ್ಕೆ ವರಿ ಯಾಕೆ. ಈ ಲೇಖನ ಓದಿದ ಮೇಲೆ ಅದ್ಯಾವ ಗಡಸು ಗಂಡಸು ಅಡುಗೆ ಮನೆ ಕಡೆ ಬರಲ್ಲ ಹೇಳಿ. ಹಾಗೂ ಬಂದಿಲ್ಲವೇ. ಪ್ರೀತಿಯಿಂದ ಗೆಲ್ಲುವ ಶಕ್ತಿಯನ್ನು ಗೃಹಿಣಿಯಾಗಿ ನೀವು ಹೊಂದಿರಬೇಕು.ನೀವು ಟಾರ್ಚರ್ ಕೊಟ್ಟು, ಕಾಟ ಕೊಟ್ರೆ ಖಂಡಿತಾ ನಿಮ್ಮ ಮನೆಯವರು ಅಡುಗೆ ಮನೆಗೆ ಬರುವುದಿಲ್ಲ. ಅವರಿಗೆ ತಿಳಿ ಹೇಳಿ.ನಿಮ್ಮ ಕಷ್ಟವನ್ನು ವಿವರಿಸಿ. ನಿಮ್ಮ ಅಡುಗೆ ಚೆನ್ನಾಗಿಲ್ಲ ಅಂದ್ರೆ ತಟ್ಟೆ, ಪಾತ್ರೆ ಕುಕ್ಕಬೇಡಿ. ನಯವಾಗಿ ಸರ್ ಒಂದ್ಸಲ ಅಡುಗೆ ಮಾಡಿ ನೋಡಿ ಎಂದು ಹೇಳಿ.
Discussion about this post