ಕಾಶ್ಮೀರ ವಿಚಾರದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಅಮರನಾಥ್ ಯಾತ್ರೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಪ್ರವಾಸಿಗರು ಜಮ್ಮು ಕಾಶ್ಮೀರ ತೊರೆಯಬೇಕು ಎಂದು ಸೂಚಿಸಲಾಗಿತ್ತು.
ಇದೀಗ ಜಮ್ಮು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

ಭಾನುವಾರ ರಾತ್ರಿ ಪೊಲೀಸರು ತಮ್ಮನ್ನು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉಸ್ಮಾನ್ ಮಜೀದ್ ಮತ್ತು ಸಿಪಿಎಂ ಶಾಸಕ ಎಂ.ವೈ. ತಾರಿಗಾಮಿ ಅವರು ಕೂಡಾ ಹೇಳಿಕೊಂಡಿದ್ದಾರೆ.
ಸೋಮವಾರ ಶಾಲಾ ಕಾಲೇಜುಗಳಿಗೆ ಕಾಶ್ಮೀರದಲ್ಲಿ ರಜೆ ಘೋಷಿಸಲಾಗಿದೆ. ಅಧಿಕಾರಿಗಳು ಕೇಂದ್ರ ಸ್ಥಾನ ತೊರೆಯದಿರುವಂತೆ ಸೂಚಿಸಲಾಗಿದೆ. ಈ ಭಾಗದಲ್ಲಿ ಇಂಟರ್ ನೆಟ್ ಸೇವೆಯನ್ನು ಕೂಡಾ ಸ್ಥಗಿತಗೊಳಿಸಲಾಗಿದೆ.

ಈಗಾಗಲೇ ಜಮ್ಮು ಕಾಶ್ಮೀರದ ರಸ್ತೆಗಳಲ್ಲಿ ಸೇನಾ ಪಡೆಗಳು ಸುತ್ತುವರಿದಿದ್ದು, ಬಿಗಿ ಭದ್ರತೆ ಕೈಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ದೊಡ್ಡ ಪ್ರಮಾಣದಲ್ಲಿ ಸೇನಾ ಪಡೆಗಳನ್ನು ಕಾಶ್ಮೀರಕ್ಕೆ ರವಾನಿಸಲಾಗಿತ್ತು.
Discussion about this post