ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಯ್ತು ಎಂದು ಅನ್ ಲಾಕ್ ಪ್ರಕ್ರಿಯೆ ಪ್ರಾರಂಭ ಮಾಡಿದ ಬೆನ್ನಲ್ಲೇ ಜನ ಎಚ್ಚರ ಮರೆತು ಬೀದಿಗಿಳಿದಿದ್ದಾರೆ. ಮಾರ್ಷಲ್ ಗಳು ಕಾಣಿಸಿಕೊಂಡ ಕಡೆ ಜನ ಮಾಸ್ಕ್ ಹಾಕುತ್ತಿದ್ದಾರೆ ಬಿಟ್ರೆ, ಬಹುತೇಕ ಕಡೆ ಮಾಸ್ಕ್ ಕುತ್ತಿಗೆಗೆ ಬಂದಿದೆ.
ಕೆ.ಆರ್.ಮಾರುಕಟ್ಟೆ ಸೇರಿದಂತೆ ನಗರದ ಅನೇಕ ಮಾರುಕಟ್ಟೆಗಳನ್ನು ಈಗಾಗಲೇ ತೆರೆಯಲಾಗಿದೆ. ಎಲ್ಲವೂ ಸರಿ ಇದ್ದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿರುತ್ತಿರಲಿಲ್ಲ. ಕೊರೋನಾ ಆತಂಕದಲ್ಲಾದರೂ ಜನ ಅಂತರ ಕಾಪಾಡಿಕೊಳ್ತಾರೆ ಅಂದ್ರೆ ಸುಳ್ಳಾಗಿದೆ. ಈ ಎಲ್ಲಾ ಕಾರಣಗಳಿಂದ ಕೊರೋನಾ ಸೋಂಕು ಕಡಿಮೆಯಾಗುವ ಬದಲು ಏರಲಾರಂಭಿಸಿದೆ.
ಕೊರೋನಾ ಸೋಂಕು ಏರುತ್ತಿರುವ ಬೆನ್ನಲ್ಲೇ ಬಿಬಿಎಂಪಿ ತಜ್ಞರ ವರದಿಯೊಂದನ್ನು ತರಿಸಿಕೊಂಡಿದ್ದು ಮುಂದೇನು ಅನ್ನುವ ಕುರಿತಂತೆ ಚಿಂತನ ಮಂಥನ ಪ್ರಾರಂಭಿಸಿದೆ. ತಜ್ಞರ ವರದಿಯಲ್ಲಿ ಹಲವು ಸ್ಪೋಟಕ ವಿಚಾರಗಳಿದ್ದು, ಆಗಸ್ಟ್ ನಲ್ಲೇ ಮೂರನೇ ಅಲೆಯ ಸುಳಿವು ನೀಡಲಾಗಿದೆ. ಆಗಸ್ಟ್ ನಲ್ಲೇ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಅನ್ನುವ ಮಾಹಿತಿ ವರದಿಯಲ್ಲಿದ್ದು, ಅಗತ್ಯ ಕ್ರಮಗಳಿಗೆ ಸೂಚಿಸಲಾಗಿದೆ.
ಇನ್ನು ಅಂತರಾಜ್ಯ ಪ್ರಯಾಣ ಮಾಡಿದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಇಂತಹ ಪ್ರಯಾಣಿಕರೇ ಕಂಟಕವಾಗುವ ಸಾಧ್ಯತೆಗಳಿದೆ ಅಂದಿರುವ ವರದಿ, ಸೋಂಕಿತರ ಸಂಪರ್ಕಿತರಲ್ಲಿ ಅಂದ್ರೆ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕಿತರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಹೇಳಿದೆ.
ಅದರಲ್ಲೂ ಕೇರಳ ಹಾಗೂ ಮಹರಾಷ್ಟ್ರದಿಂದ ಬಂದವರಲ್ಲೂ ಸೋಂಕು ವ್ಯಾಪಕವಾಗಿದೆ, ಸೋಂಕಿತರ ಸಂಪರ್ಕಿತರ ಪತ್ತೆ ಕಾರ್ಯವನ್ನು ಶೀಘ್ರದಲ್ಲೇ ಮಾಡುವಂತೆ ಸಲಹೆ ನೀಡಿದೆ. ಜೊತೆಗೆ ಪ್ರತಿ ಕೇಸ್ ಗೆ 20 ಸಂಪರ್ಕಿತರ traceout ಮಾಡುವಂತೆ ಸೂಚಿಸಿದೆ.
ಇನ್ನು ಬಿಬಿಎಂಪಿ ಕೂಡಾ ಸೋಂಕು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಒಂದೇ ಕಡೆ ಮೂರು ಅಥವಾ ಅದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾದರೆ ಅದನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸುವುದಾಗಿ ಬಿಬಿಎಂಪಿ ಹೇಳಿದೆ. ಜೊತೆಗೆ ಬೊಮ್ಮನಹಳ್ಳಿ ಸೇರದಂತೆ ಸೋಂಕು ವ್ಯಾಪಕವಾಗಿರುವ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೂ ಬಿಬಿಎಂಪಿ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಸೋಂಕಿತರ ಮನೆ ಮುಂದೆ ಬೋರ್ಡ್ ಹಾಕಲು ನಿರ್ಧರಿಸಲಾಗಿದೆ.
Discussion about this post