ಮಂಗಳೂರು : ಕರ್ನಾಟಕದ ಕಡಲ ನಗರಿಯಿಂದ ಕೊರೋನಾ ಹೋಯ್ತು ಅನ್ನುವಷ್ಟರಲ್ಲಿ ಮತ್ತೆ ಮಹಾಮಾರಿ ವಕ್ಕರಿಸಿದೆ.
ಈ ಬಾರಿ ನಿರ್ಲಕ್ಷ್ಯದ ಕಾರಣದಿಂದಲೇ ಕರಾವಳಿಯಲ್ಲಿ ಕೊರೋನಾ ಅಬ್ಬರಿಸಲಾರಂಭಿಸಿದೆ.
ಕೇರಳದಿಂದ ಬರುವವರಿಗೆ ಕೊರೋನಾ ನೆಗೆಟಿವ್ ಕಡ್ಡಾಯ ಅನ್ನಲಾಗಿತ್ತು. ಆದರೆ ಅದು ಎಲ್ಲೂ ಪಾಲನೆಯಾಗಲಿಲ್ಲ.
ಇನ್ನು ಕೇರಳದಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಉಳಿದುಕೊಳ್ಳುವುದಾಗಿದ್ದರೆ ಅವರನ್ನು ಕನಿಷ್ಟ 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿಡ ಬೇಕಾಗಿತ್ತು. ಆದರೆ ಅದ್ಯಾವುದನ್ನೂ ಕರಾವಳಿಯ ಶಿಕ್ಷಣ ಸಂಸ್ಥೆಗಳು ಪಾಲಿಸಲೇ ಇಲ್ಲ.
ಇನ್ನು ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರನ್ನು ತುಂಬುತ್ತಿದ್ದ ಪರಿ ನೋಡಿದ್ರೆ ಕರೋನಾ ವೈರಸ್ ಗಾಬರಿಯಾಗಿತ್ತು. ಆದರೆ ಜಿಲ್ಲಾಡಳಿತ ಕೊರೋನಾ ನಿಯಮ ಉಲ್ಲಂಘನೆಯ ಬಗ್ಗೆ ಮೌನಕ್ಕೆ ಶರಣಾಗಿತ್ತು.
ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ಶೇ 1ಕ್ಕಿಂತ ಹೆಚ್ಚಾಗಿದೆ.
ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ( ಒಟ್ಟು ಪರೀಕ್ಷೆ ಮಾಡಿದ ಸ್ಯಾಂಪಲ್ ಗಳಲ್ಲಿ ಪಾಸಿಟಿವ್ ) ಶೇ1ಕ್ಕಿಂತ ಕಡಿಮೆಯಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ 1ಕ್ಕಿಂತ ಹೆಚ್ಚಿದೆ.
ಹೀಗಾಗಿಯೇ ರಾಜ್ಯಕ್ಕೆ ಹೋಲಿಸಿದರೆ ಕರಾವಳಿ ಜಿಲ್ಲೆ ಹೆಚ್ಚಿನ ಅಪಾಯದಲ್ಲಿದೆ.
ಕೇರಳದಿಂದ ಬಂದಿರುವ ವಿದ್ಯಾರ್ಥಿಗಳಿಂದ ಸೋಂಕು ಹರಡುತ್ತಿರುವ ಕಾರಣದಿಂದಲೇ ಪಾಸಿಟಿವಿಟಿ ದರ ಹೆಚ್ಚಾಗಿದೆ ಎನ್ನಲಾಗಿದೆ.
Discussion about this post