ಧಾರವಾಡ : 25 ವರ್ಷಗಳ ಹಿಂದೆ ದಾರಿ ತಪ್ಪಿ ಕಾಶ್ಮೀರ ಸೇರಿದ್ದ ವ್ಯಕ್ತಿಯೊಬ್ಬರನ್ನು ಕನ್ನಡಿಗ ಯೋಧರು ಮತ್ತೆ ಮನೆಗೆ ಸೇರಿಸಿದ್ದಾರೆ.
ಧಾರವಾಡ ಜಿಲ್ಲೆ ಕಲಘಟಗಿಯ ಕೆಂಚಪ್ಪ ಗೋವಿಂದಪ್ಪ ವಡ್ಡರ ಅನ್ನುವವರು ಕೂಲಿ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು.
ಅದೇನಾಯ್ತೋ ಗೊತ್ತಿಲ್ಲ, ಹೋದ ಕಡೆ ಎಲ್ಲಾ ದಾರಿ ತಪ್ಪಿದ್ದಾರೆ. ಹೀಗಾಗಿ ಟಿಕೆಟ್ ಇಲ್ಲದೆ ರೈಲು ಹತ್ತಿ ಊರು ಸೇರಲು ಪ್ರಯತ್ನಿಸಿದ್ದಾರೆ. ಈ ವೇಳೆ ಅವರು ತಲುಪಿದ್ದು ಜಮ್ಮುಕಾಶ್ಮೀರ.
ಹೊಟ್ಟೆಪಾಡಿನ ಸಲುವಾಗಿ ಅಲ್ಲಿನ ಹೊಟೇಲ್ ಒಂದರಲ್ಲಿ ಕೆಲಸಕ್ಕೆ ಸೇರಿದ್ದ ಗೋವಿಂದಪ್ಪ ಅರ ಹಣೆ ಬರಹ ಅಲ್ಲೂ ಸರಿ ಇರಲಿಲ್ಲ.
ಗೋವಿಂದಪ್ಪ ಅನಕ್ಷರಸ್ಥ ಎಂದು ಗೊತ್ತಾಗುತ್ತಿದ್ದಂತೆ ಹೊಟೇಲ್ ಮಾಲೀಕ ಇವರನ್ನು ಜೀತದಾಳಿನಂತೆ ದುಡಿಸಿಕೊಳ್ಳಲಾರಂಭಿಸಿದ್ದ.
ಸರಿಯಾಗಿ ಕೂಲಿ ನೀಡಲಿಲ್ಲ, ಊಟ ಹಾಕಲಿಲ್ಲ, ಊರಿಗೂ ಕಲಿಸದೆ ರಾತ್ರಿ ಹೊತ್ತಿನಲ್ಲಿ ಕೈ ಕಾಲು ಕಟ್ಟಿ ಕೂಡಿ ಹಾಕಿ ಪ್ರಾಣ ತಿನ್ನುತ್ತಿದ್ದ.
ಹಲವು ವರ್ಷಗಳು ಹೀಗೆ ಮುಂದುವರಿಯಿತು. ಕೊನೆಗೆ ನನ್ನ ಹಣೆ ಬರಹವೇ ಇಷ್ಟು ಎಂದು ಕೆಂಚಪ್ಪ ಮಾಲೀಕನ ಕ್ರೌರ್ಯಕ್ಕೆ ಒಗ್ಗಿ ಹೋದರು.
ಇತ್ತೀಚೆಗೆ ಕರ್ನಾಟಕದ ಯೋಧರು ಆಕಸ್ಮಿಕವಾಗಿ ಈ ಹೋಟೆಲ್ ಗೆ ಹೋದ ಸಂದರ್ಭದಲ್ಲಿ ತನಗಾಗುತ್ತಿರುವ ಅನ್ಯಾಯವನ್ನು ಕೆಂಚಪ್ಪ ವಿವರಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತರಾದ ಗದಗ ಮಂಗಳೂರು ಹಾಗೂ ಬೆಂಗಳೂರು ಮೂಲದ ಕನ್ನಡಿಗ ಯೋಧರು, ಕೆಂಚಪ್ಪ ಅವರನ್ನು ರಕ್ಷಿಸಿ ಇದೀಗ ಮನೆಗೆ ಸೇರಿಸಿದ್ದಾರೆ.
70 ವರ್ಷದ ಕೆಂಚಪ್ಪ ಅವರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೊನೆಗೂ ತಂದೆ ಮನೆಗೆ ಮರಳಿದ ಖುಷಿಯಲ್ಲಿ ಮನೆಯವರಿದ್ದಾರೆ.
Discussion about this post