ಬೆಂಗಳೂರು : ಮೋಜಿನ ಜೀವನಕ್ಕೆ ಒಳಗಾಗಿ ಐಪಿಎಲ್ ಬೆಟ್ಟಿಂಗ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಮಗನ ಸಾಲ ತೀರಿಸಲು ತಾಯಿಯೊಬ್ಬಳು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೆಜಿ ಹಳ್ಳಿ ನಿವಾಸಿಗಳಾದ ಮೇರಿ ಆಲಿಸ್ ಹಾಗೂ ಈಕೆಯ ಪುತ್ರ ಮೈಕಲ್ ವಿನ್ಸೆಂಟ್ ಬಂಧಿತರು.
ಬೆಂಗಳೂರಿನ ಅಬ್ಬಾಸ್ ಆಲಿ ರಸ್ತೆಯಲ್ಲಿರುವ ಎಂಬೆಸ್ಸಿ ಕ್ರೌನ್ ಅಪಾರ್ಟ್ ಮೆಂಟ್ ನಿವಾಸಿ ಬಾಲಿವುಡ್ ನಟ ಬೊಮನ್ ಇರಾನಿ ಅವರ ಸೋದರ ಸಂಬಂಧಿ ಖುರ್ಷಿದ್ ಇರಾನಿ ಅವರ ಮನೆಯಲ್ಲಿ ಕಳೆದ 28 ವರ್ಷಗಳಿಂದ ಮೇರಿ ಖುರ್ಷಿದ್ ಮನೆ ಕೆಲಸ ಮಾಡಿಕೊಂಡಿದ್ದರು, ಸರಿ ಸುಮಾರು 3 ದಶಕಗಳ ನಂಟು ಹೊಂದಿದ್ದ ಕಾರಣ ಮನೆ ಮಂದಿಗೆಲ್ಲಾ ಈಕೆಯ ಮೇಲೆ ವಿಶ್ವಾಸವಿತ್ತು. ಹೀಗಾಗಿ ಮನೆ ಪೂರ್ತಿ ಓಡಾಡುವ ಅವಕಾಶ ಈಕೆಗಿತ್ತು.
ಯಾವಾಗ ಮಗ ಹಣ ಕಳೆದುಕೊಂಡು ಕಂಗಲಾದನೋ, ಸಾಲ ತೀರಿಸಲು ತಾಯಿ ಮೇಲೆ ಒತ್ತಡ ಹೇರಲಾರಂಭಿಸಿದನೋ ಕೆಲಸಕ್ಕಿದ್ದ ಮನೆಯಲ್ಲೇ ಕಳ್ಳತನ ಮಾಡಲು ನಿರ್ಧರಿಸಿದಳು.
ಖುರ್ಷಿದ್ ಅವರ ಮನೆಯ ಲಾಕರ್ ನಲ್ಲಿದ್ದ 100 ಗ್ರಾಂ ತೂಕದ ಒಂಭತ್ತು ಚಿನ್ನದ ಬಿಸ್ಕೆಟ್, 85 ಲಕ್ಷ ನಗದು ಹಾಗೂ 11 ಲಕ್ಷ ಮೌಲ್ಯದ 15 ಸಾವಿರ ಯುಎಸ್ ಕರೆನ್ಸಿಗಳನ್ನು ಕಳ್ಳತನ ಮಾಡಿ ಮಗನ ಕೈಗೆ ಕೊಟ್ಟಿದ್ದಾಳೆ.
ಪುತ್ರ ವಿನ್ಸೆಂಟ್ ಚಿನ್ನದ ಬಿಸ್ಕೆಟ್ ಗಳನ್ನು ಕೆಲ ಮಳಿಗೆಗಳಿಗೆ ಮಾರಾಟ ಮಾಡಿದ್ದ.
ನವೆಂಬರ್ 29 ರಂದು ಮನೆ ಮಾಲೀಕ ಖುರ್ಷಿದ್ ಲಾಕರ್ ತೆಗೆದು ನೋಡಿದ ವೇಳೆ ಕಳ್ಳತನದ ಕೃತ್ಯ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಮೇರಿ ಮೇಲೆಯೇ ಆರೋಪ ಹೊರಿಸಿ ಹಲಸೂರು ಠಾಣೆಗೆ ದೂರು ನೀಡಿದ್ದರು. ಇದಾದ ಬಳಿಕ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Discussion about this post