ಮಳೆ ಸಲುವಾಗಿ ಕಪ್ಪೆ ಮದುವೆ, ಕತ್ತೆ ಮದುವೆ ಮಾಡಿಸುವುದನ್ನು ಕೇಳಿದ್ದೇವೆ. ಇನ್ನೂ ವರುಣನನ್ನು ಒಲಿಸಿಕೊಳ್ಳುವ ಸಲುವಾಗಿ ದೇವಸ್ಥಾನಗಳಲ್ಲಿ ವಿವಿಧ ಬಗೆಯ ಅಭಿಷೇಕ ನಡೆಸುವುದು ಕೂಡಾ ಗೊತ್ತು. ಆದರೆ ಮಧ್ಯಪ್ರದೇಶದಲ್ಲಿ ಮಳೆಗಾಗಿ ನಾಗರಿಕ ಸಮಾಜವೊಂದು ತಲೆ ತಗ್ಗಿಸುವ ಕಾರ್ಯವನ್ನು ಮಾಡಲಾಗಿದೆ.
ಮಧ್ಯಪ್ರದೇಶದ ಬುಡಕಟ್ಟು ಗ್ರಾಮವೆಂದೇ ಗುರುತಿಸಿಕೊಂಡಿರುವ ದಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಪ್ರಾಪ್ತ ಬಾಲಕಿಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿದೆ. ಜೊತೆಗೆ ಹೀಗೆ ಬೆತ್ತಲಾದ ಬಾಲಕಿಯರನ್ನು ಸ್ಥಳೀಯರ ಮನೆಗಳಲ್ಲಿ ಭಿಕ್ಷೆ ಬೇಡುವಂತೆ ಮಾಡಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ 5 ರಿಂದ 6 ವರ್ಷದ ಬಾಲಕಿಯರು ಮೈಗೆ ಕಪ್ಪೆಯನ್ನು ಕಟ್ಟಿಕೊಂಡು ನಡೆಯುತ್ತಿರುವುದು ಕಾಣಿಸಿದೆ. ಇದೇ ಮೆರವಣಿಗೆಯಲ್ಲಿ ಅನೇಕ ಮಹಿಳೆಯರು ಹಾಡುತ್ತಾ ಸಾಥ್ ಬೇರೆ ಕೊಟ್ಟಿದ್ದಾರೆ.

ಈ ಘಟನೆ ಭಾನುವಾರ ನಡೆದಿದ್ದು, ವಿಷಯ ಗೊತ್ತಾಗುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ಥಳೀಯ ಜಿಲ್ಲಾಡಳಿತದಿಂದ ವರದಿ ಕೇಳಿದ್ದು, ಕಠಿಣ ಕ್ರಮದ ಮುನ್ಸೂಚನೆ ನೀಡಿದೆ.
ಇನ್ನು ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿದೆ ಪ್ರತಿಕ್ರಿಯಿಸಿರುವ ಸ್ಥಳೀಯರು ಇದೊಂದು ಧಾರ್ಮಿಕ ಆಚರಣೆಯ ಭಾಗ, ಮಳೆ ದೇವರನ್ನು ಸಮಾಧಾನ ಪಡಿಸಲು ಹೀಗೆ ಮಾಡುತ್ತೇವೆ. ಬಾಲಕಿಯರು ಹಳ್ಳಿಯ ಪ್ರತೀ ಮನೆಗೆ ಭೇಟಿ ಕೊಡುತ್ತಾರೆ. ಅಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಹಳ್ಳಿಯ ದೇವಾಲಯದಲ್ಲಿ ಅಡುಗೆ ಮಾಡಿ ದೇವರಿಗೆ ಇಡುತ್ತೇವೆ ಅಂದಿದ್ದಾರೆ.
Discussion about this post