ಚಾಮರಾಜನಗರ : ಜೀವನದಲ್ಲಿ ಕಷ್ಟ ಅನ್ನುವುದು ಎಲ್ಲರಿಗೂ ಬಂದೇ ಬರುತ್ತದೆ. ಶಕ್ತಿ ಇದ್ದವರು ಎದುರಿಸುತ್ತಾರೆ. ಕೆಲವರು ಶಕ್ತಿ ಇದ್ದಷ್ಟು ದಿನ ಗೆಲುವಿನ ಕಡೆಗೆ ಈಜುತ್ತಾರೆ.
ಸೋಲುತ್ತಿದ್ದೇವೆ ಅನ್ನಿಸಿದಾಗ ಓ ದೇವರೇ ಎಂದು ಮೊರೆ ಇಡುತ್ತಾರೆ. ಹೀಗೆ ದೇವರ ಕಡೆ ಮುಖ ಮಾಡುವ ಆಸ್ತಿಕರು ಚೀಟಿ ಬರೆದು ದೇವರ ಹುಂಡಿಗೆ ಹಾಕೋದು ಹಿಂದಿನಿಂದ ಬಂದ ವಾಡಿಕೆ.
ನಾನು ಬರೆದ ಹರಕೆ ಚೀಟಿಗಳನ್ನು ದೇವರೇ ಒಂದು ಓದುವುದಿಲ್ಲ ಎಂದು ಗೊತ್ತಿದೆ. ಆದರೂ ಸಂಕಷ್ಟಗಳು ಪರಿಹಾರವಾಗುತ್ತದೆ ಅನ್ನುವ ನಂಬಿಕೆ.
ಹೀಗೆ ಚೀಟಿ ಬರೆದು ಹಾಕಿದ್ರೆ ಸಂಕಷ್ಟಗಳೆಲ್ಲಾ ದೂರವಾಗುವ ದೇವಸ್ಥಾನಗಳು ನಮ್ಮ ನಡುವಿದೆ.
ಆದರೆ ಮುಜರಾಯಿ ಇಲಾಖೆಯ ಅಡಿಯಲ್ಲಿ ಬರೋ ದೇವಸ್ಥಾನಗಳಿಗೆ ಚೀಟಿ ಬರೆದು ಹಾಕಿದ್ರೆ ಅದು ನಾಳೆ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ಆಗೋದು ಗ್ಯಾರಂಟಿ.
ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಚಾಮರಾಜನಗರ ಕೊಳ್ಳೆಗಾಲ ಪಟ್ಟಣದ ನಾರಾಯಣ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಸಿಕ್ಕಿರುವ ಪತ್ರ.
ಬಿಟ್ಟು ಹೋಗಿರುವ ಗಂಡಂದಿರುವ ನಮಗೆ ಸಿಗಲಿ ಎಂದು ಮಹಿಳೆಯರು ಪ್ರತ್ಯೇಕವಾಗಿ ಪತ್ರ ಬರೆದು ಹಾಕಿದ್ದಾರೆ.
ಹೀಗೆ ಹಾಕಿದ ಪತ್ರ ಕಾಣಿಕೆ ಡಬ್ಬಿ ಕಾಸು ಎಣಿಸುವಾಗ ಮುಜರಾಯಿ ಇಲಾಖೆ ಅಧಿಕಾರಿಗಳಿಗೆ ಸಿಕ್ಕಿದೆ. ಅದರ ಫೋಟೋ ತೆಗೆದ ಅಧಿಕಾರಿಗಳು ಎಲ್ಲೆಡೆ ಹರಿ ಬಿಟ್ಟಿದ್ದಾರೆ.
ಇದೇನು ಮೊದಲಲ್ಲ, ಈ ಹಿಂದೆಯೂ ಸಾಕಷ್ಟು ಸಲ ಹೀಗಾಗಿದೆ.
ದೇವರಿಗೆಂದು ಬರೆದ ಪತ್ರವನ್ನು ಈ ದಡ್ಡ ಅಧಿಕಾರಿಗಳು ವೈರಲ್ ಮಾಡ್ತಾರೆ ಅನ್ನುವುದಾದ್ರೆ ಭಕ್ತರ ಭಾವನೆಗಳೇನಾಗಬೇಕು. ಸಂಕಷ್ಟದಲ್ಲಿರುವ ಮಂದಿ ಪತ್ರ ಬರೆದಿರೋದು ದೇವರಿಗೆ ಹೊರತು ಅಧಿಕಾರಿಗಳಿಗಲ್ಲ.
ಕನಿಷ್ಟ ಪಕ್ಷ ಹೀಗೆ ಬಂದ ಪತ್ರಗಳನ್ನು ದೇವರ ಮುಂದಿಟ್ಟು ಅರ್ಚನೆಯೊಂದನ್ನು ಮಾಡಿಸಿ ಅವರ ಸಂಕಷ್ಟ ಪರಿಹರಿಸುವಂತೆ ಪ್ರಾರ್ಥಿಸುವ ಕೆಲಸ ಮಾಡೋದನ್ನ ಬಿಟ್ಟು, ಹೀಗೆ ಮಾಡೋದು ಸರಿಯೇ.

ಸಜ್ಜನರೆಂದು ಕರೆಸಿಕೊಂಡಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕಡೆ ಗಮನ ಹರಿಸೋದು ಒಳಿತು.