ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಕೃಷಿ ಪಾಠ ಮಾಡಲಾಗುತ್ತದೆ.ಆದರೆ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶ್ರೀ ಭಾರತೀ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ತಾನು ದತ್ತು ಸ್ವೀಕರಿಸಿದ ಕುರ್ನಾಡು ಗ್ರಾಮದ ಗದ್ದೆಯೊಂದರಲ್ಲಿ ಬೇಸಾಯ ಮಾಡಿ ಬರೋಬ್ಬರಿ 620 ಕೆ.ಜಿ. ಭತ್ತ ಬೆಳೆದಿದೆ.
ಮಳೆಗಾಲ ಆರಂಭದಲ್ಲಿ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮದ ಮೂಲಕ ಸಂಭ್ರಮಿಸಿದ ವಿದ್ಯಾರ್ಥಿಗಳು ಬಳಿಕ ಭತ್ತದ ಬೇಸಾಯದ ಸಂಕಲ್ಪದೊಂದಿಗೆ ಉಳುಮೆ ಕಾಯಕದಲ್ಲಿ ತೊಡಗಿದರು. ಕಾಲೇಜನ್ನು ಬಿಟ್ಟು, ಹೊರಪ್ರಪಂಚದಲ್ಲಿ ಬಿಸಿಲನ್ನು ಲೆಕ್ಕಿಸದೇ ಗದ್ದೆಯಲ್ಲಿ ಕಾರ್ಯ ನಿರ್ವ ಹಿಸಿದ ವಿದ್ಯಾರ್ಥಿಗಳು ಶ್ರಮ ವಹಿಸಿದ್ದರು. ಅನುಭವವಿಲ್ಲದಿದ್ದರೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಪೈರು ಬಡಿದರು. ತಾವೇ ಬೆಳೆದ ಪೈರಿನ ಫಸಲು ಕಂಡು ಸಂಭ್ರಮಿಸಿದರು.
ಶ್ರೀರಾಮಚಂದ್ರಾಪುರ ಮಠದ ಅಂಗಸಂಸ್ಥೆ ಶ್ರೀ ಭಾರತೀ ಸಮೂಹ ಸಂಸ್ಥೆಯ ಈ ಎನ್ನೆಸ್ಸೆಸ್ ಘಟಕವು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯವರಿಗೆ 5 ಸೇರು ಭತ್ತವನ್ನು ಸಮರ್ಪಿಸಿ, ಉಳಿದ ಬೆಳೆಯನ್ನು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ ಹಾಗೂ ಬಿಸಿಯೂಟ ಯೋಜನೆಗೆ ಬಳಸಲು ನಿರ್ಧರಿಸಿದೆ. 618 ಕೆ.ಜಿ. ಭತ್ತ ಅಂದರೆ 360 ಕೆ.ಜಿ. ಅಕ್ಕಿಯನ್ನು ತಾವೇ ಕೈಯಾರೆ ಬೆಳೆಸಿದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸುಮಾರು ಅರ್ಧ ಎಕ್ರೆ ವಿಸ್ತೀರ್ಣದ ಗದ್ದೆಯಲ್ಲಿ ಎಂಆರ್4 ಹಾಗೂ ಭದ್ರಾ ತಳಿಯನ್ನು ವಿದ್ಯಾರ್ಥಿಗಳು ಬೇಸಾಯ ಮಾಡಿದ್ದರು. ಮಕ್ಕಳೇ ನೇಜಿ ನೆಟ್ಟು ಗೊಬ್ಬರ ಹಾಕಿದ್ದು, ಭತ್ತದ ಪೈರು ಬೆಳೆಯುತ್ತಿದ್ದಂತೆ ಗದ್ದೆಗೆ ಆಗಾಗ ಭೇಟಿ ನೀಡಿ, ಕಳೆ ಕೀಳುವ ಕಾಯಕ ಮಾಡುತ್ತಿದ್ದರು.
ಬಲಿತು ಒಣಗಿದ್ದ ತೆನೆಗಳನ್ನು ಕೆಲವು ದಿನಗಳ ಹಿಂದೆ ಕಟಾವು ಮಾಡಲು ಯೋಚಿಸಿದ್ದರು. ಅನುಭವಿ ಕಾರ್ಮಿಕರ ಸಹಾಯಕ್ಕೂ ಮನವಿ ಮಾಡಿದ್ದರು. ಆದರೆ ವಿದ್ಯಾರ್ಥಿಗಳು ಹಿಂದಿನ ದಿನ ಪರೀಕ್ಷೆ ಮುಗಿಸಿ, ಗದ್ದೆಗಿಳಿಯುವ ಹೊತ್ತಿಗೆ ಕಾರ್ಮಿಕರು ಬಂದಿರಲಿಲ್ಲ. ಪ್ರಾಂಶುಪಾಲರು, ಶಿಬಿರಾಧಿಕಾರಿಗಳು, ಮಕ್ಕಳು ಹಿಂಜರಿಯಲಿಲ್ಲ. ಕೊಯ್ಲನ್ನು ಎರಡು ದಿನಗಳಲ್ಲಿ ಮುಗಿಸಿದ್ದರು.
Discussion about this post