ಬೆಂಗಳೂರು : ಕೋರಮಂಗಲದಲ್ಲಿ ನಡೆದ ಕಾರು ಅಪಘಾತ ಪ್ರಕರಣದಲ್ಲಿ ಹೊಸೂರು ಶಾಸಕರ ಪುತ್ರ ಸೇರಿ 7 ಜನ ಮೃತಪಟ್ಟಿದ್ದರು. ದುಬಾರಿ ಕಾರು ಮತ್ತು ಶ್ರೀಮಂತರ ಮಕ್ಕಳು ಮಾಡಿದ ಈ ಅನಾಹುತ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸಿದ್ದಾರೆ. ಇದೀಗ ಅಪಘಾತಕ್ಕೆ ಕಾರಣ ಸಿಕ್ಕಿದ್ದು, ಅತೀಯಾದ ಮದ್ಯಪಾನವೇ ಇವರೆಲ್ಲರ ಪ್ರಾಣ ಕಸಿಯಿತು ಎಂದು ಗೊತ್ತಾಗಿದೆ.
ಅಪಘಾತ ಕುರಿತಂತೆ ಬಹುತೇಕ ಎಲ್ಲಾ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದು, ಅಪಘಾತದ ವೇಳೆ ವಾಹನ ಚಲಾಯಿಸುತ್ತಿದ್ದ ಹೊಸೂರು ಶಾಸಕನ ಪುತ್ರನ ಕರುಣಾಸಾಗರ್ ಮದ್ಯಪಾನ ಮಾಡಿದ್ದ ಎಂದು ಗೊತ್ತಾಗಿದೆ. ಇದೇ ವೇಳೆ ಕಾರಿನಲ್ಲಿದ್ದವರು ಅಂದಿನ ಟ್ರಾವೆಲ್ ಹಿಸ್ಟರಿ ಕೂಡಾ ಪೊಲೀಸರ ಕೈಗೆ ಸಿಕ್ಕಿದೆ.

ಕರುಣಾಸಾಗರ್ ಸ್ನೇಹಿತೆಯರು ಕೋರಮಂಗಲದ ಪಿಜಿ ಬಳಿಯ ಅಂಗಡಿಯಿಂದ ಮದ್ಯ ಖರೀದಿಸಿದ್ದಾರೆ. ರಾತ್ರಿ 8.45ಕ್ಕೆ ಇವರು ಮದ್ಯದೊಂದಿಗೆ ಪಿಜಿ ಸೇರಿದ್ದಾರೆ. ನಂತ್ರ 11.45ರ ತನಕ ಪಿಜಿಯಲ್ಲೇ ಪಾರ್ಟಿ ಮಾಡಿದ ಗೆಳೆಯರ ಗ್ಯಾಂಗ್ ಕುಡಿದ ನಶೆಯಲ್ಲಿ ನೈಟ್ ರೌಂಡ್ಸ್ ಹೊರಟಿದ್ದಾರೆ.
ಈ ವೇಳೆ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಾಗ ನಾನು ಶಾಸಕರ ಮಗ ಎಂದು ಕರುಣಾಸಾಗರ್ ಹೇಳಿದ್ದಾನೆ. ಆಗ್ಲೇ ಪೊಲೀಸರು ಎಲ್ಲರನ್ನೂ ಮೆಡಿಕಲ್ ಟೆಸ್ಟ್ ಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದ್ರೆ ಸರಿ ಇರೋದು. ಪಾಪ ಅವರೆಲ್ಲಾ ದೊಡ್ಡವರ ಮಕ್ಕಳು ದೊಡ್ಡ ಕಾರಿನಲ್ಲಿ ಬಂದವರಲ್ವ.
ಇದಾದ ಬಳಿಕ ಕರುಣಾಸಾಗರ್ ಗ್ಯಾಂಗ್ ವೆಂಕಟಾಪುರದ ಸ್ನೇಹಿತರ ಮನೆಗೆ ತೆರಳಿ ಅಲ್ಲಿ ಊಟ ತರಿಸಿ ಊಟ ಮಾಡಿದ್ದಾರೆ.. ನಂತರ ರಾತ್ರಿ 1.35ರ ಸುಮಾರಿಗೆ ಮತ್ತೆ ನೈಟ್ ರೌಂಡ್ಸ್ ಮುಂದುವರಿಸಿದ್ದಾರೆ. ಈ ವೇಳೆ ಎಣ್ಣೆ ಏಟಿನಲ್ಲಿ ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ.
ಕಾರು ಓಡಿಸುತ್ತಿದ್ದ ಶಾಸಕರ ಪುತ್ರ ಕರುಣಾಸಾಗರ್ ವಿಪರೀತ ಕುಡಿದಿದ್ದ ಜೊತೆಗೆ ಇನ್ನಿಬ್ಬರು ಕೂಡ ಕಂಠ ಪೂರ್ತಿ ಕುಡಿದಿದ್ದರು ಅನ್ನುವುದು ಸಾಬೀತಾಗಿದೆ. ಈ ಮೂಲಕ ಅಪಘಾತಕ್ಕೂ ಮುನ್ನ ಕರುಣಾಸಾಗರ್ ಮತ್ತು ಆತನ ಸ್ನೇಹಿತರು ಪಾರ್ಟಿ ಮಾಡಿರುವುದು ಸ್ಪಷ್ಟವಾಗಿದೆ. ನೈಟ್ ಕರ್ಫ್ಯೂ ಇದ್ದರೂ ಇವರೆಲ್ಲರೂ ಪಾರ್ಟಿ ಮಾಡಿದ್ದಾರೆ ಅಂದ್ರೆ ಎಲ್ಲೋ ವ್ಯವಸ್ಥೆಯ ಲೋಪದ ವಾಸನೆ ಬಡಿಯುತ್ತಿದೆ. ಇನ್ನು ಮೃತರು ಡ್ರಗ್ಸ್ ಸೇವನೆ ಮಾಡಿದ್ದರೋ ಇಲ್ಲವೋ ಅನ್ನುವುದರ ವರದಿಯನ್ನು ಪೊಲೀಸರು ನಿರೀಕ್ಷಿಸುತ್ತಿದ್ದಾರೆ.
Discussion about this post