70 ವರ್ಷಗಳಲ್ಲಿ ಇದೇ ಮೊದಲ ಸಲ ತುಂಗಭದ್ರಾ ಜಲಾಶಯಕ್ಕೆ ಆತಂಕ
ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿ ಗೇಟ್ ಮೂಲಕ ಅಪಾರ ಪ್ರಮಾಣದ ನೀರು, ನದಿ ಪಾತ್ರಕ್ಕೆ ಹರಿಯುತ್ತದೆ.
ರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ನದಿ ಪಾತ್ರದ ಜನರಲ್ಲಿ ಭಾರೀ ಆತಂಕ ಮೂಡಿಸಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದಿತ್ತು.
ಜಲಾಶಯದ 19ನೇ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿರು ಕಾರಣ ಅದನ್ನು ಸರಿಪಡಿಸಲು ಭಾನುವಾರ ಬೆಳಗ್ಗೆ ಬೆಂಗಲೂರಿನಿಂದ ತಜ್ಞರ ತಂಡ ತೆರಳಲಿದೆ. ಈ ಬಗ್ಗೆ ಕರ್ನಾಟಕ ನೀರಾವರಿ ನಿಗಮದ ತುಂಬಭದ್ರಾ ಯೋಜನಾ ವೃತ್ತದ ಎಂಜಿನಿಯರ್ ಎಲ್. ಬಸವರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗ್ಳೂರಿಗೆ ಶರಾವತಿ ನೀರು : ಕೈ ಬಿಟ್ಟ ಯೋಜನೆಗೆ ಮತ್ತೊಮ್ಮೆ ಸಮೀಕ್ಷೆ
ಪ್ರತೀ ವರ್ಷ ಜಲಾಶಯದ ಗೇಟ್ ಗಳ ನಿರ್ವಹಣೆ ನಡೆಯುತ್ತದೆ. ಜಲಾಶಯದ ಸುರಕ್ಷತೆಗೆ ಯಾವುದೇ ಆತಂಕವಿಲ್ಲ. ಆದರೆ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಈಗಿನ ನೀರಿನ ಮಟ್ಟದಲ್ಲಿ ಸಮಸ್ಯೆ ಪರಿಹಸಲು ಸಾಧ್ಯವೇ ಅನ್ನೋ ಪ್ರಶ್ನೆ ಎಂದು ಅವರು ತಿಳಿಸಿದ್ದಾರೆ.
ತುಂಗಭದ್ರಾ ಡ್ಯಾಂ ಒಟ್ಟು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಡ್ಯಾಂನಲ್ಲಿ 33 ಟಿಎಂಸಿ ಹೂಳು ತುಂಬಿದ ಹಿನ್ನಲೆಯಲ್ಲಿ ಡ್ಯಾಂ ಸಂಗ್ರಹ ಸಾಮರ್ಥ್ಯ 100 ಟಿಎಂಸಿಯಷ್ಟಿದೆ. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 100 ಟಿಎಂಸಿ ಅಷ್ಟು ನೀರಿದೆ.
ಶನಿವಾರ ರಾತ್ರಿ ತುಂಗಭದ್ರಾ ಡ್ಯಾಮಿನ 19ನೇ ಕ್ರಸ್ಟ್ ಗೇಟ್ನ ಚೈನ್ ತುಂಡಾಗಿರುವ ಕಾರಣ ದುರಸ್ಥಿಗೆ ಬಂದಿರುವ ಗೇಟ್ ನ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಉಳಿದ ಗೇಟ್ ಗಳ ಮೂಲಕ 35,000ಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಹರಿಯುತ್ತಿದೆ.
ಇದು ನದಿ ಪಾತ್ರದ ಹಳ್ಳಿಗಳಲ್ಲಿ ಭಾರಿ ಆತಂಕಕ್ಕೂ ಕಾರಣವಾಗಿದೆ. ತುಂಗಭದ್ರಾ ನೀರಾವರಿ ಇಲಾಖೆಯು ಸಹ ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದೆ. ಸ್ಥಳಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಸೇರಿದಂತೆ ನೀರಾವರಿ ಇಲಾಖೆಯ ತಜ್ಞರ ತಂಡವು ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು ಜಿಲ್ಲಾಡಳಿತಗಳು ನದಿ ಪಾತ್ರದಲ್ಲಿ ಜನರಿಗೆ ಅಲರ್ಟ್ ಇರುವಂತೆ ರಾತ್ರೋರಾತ್ರಿ ಡಂಗುರ ಸಾರಿಸಿದ್ದು, ಆಂಧ್ರ, ತೆಲಂಗಾಣ ರಾಜ್ಯಕ್ಕೂ ಎಚ್ಚರಿಕೆ ನೀಡಲಾಗಿದೆ.
19 ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ನೀರಿನ ಮಟ್ಟವನ್ನು 55 ರಿಂದ 65 ಟಿಎಂಸಿ ವರೆಗೂ ಇಳಿಸೋದು ಅನಿವಾರ್ಯವಾಗಿದೆ. ಅಂದ್ರೆ ಅಣೆಕಟ್ಟಿನ ಅರ್ಧದಷ್ಟು ನೀರನ್ನು ಪೋಲು ಮಾಡಬೇಕಾಗುತ್ತದೆ. 1633 ಅಡಿಯಲ್ಲಿ 20 ರಿಂದ 21 ಅಡಿಯಷ್ಟು ನೀರು ಖಾಲಿಯಾದ್ರೆ ಮಾತ್ರ ಗೇಟ್ ದುರಸ್ತಿ ಕಾರ್ಯ ಸಾಧ್ಯವಾಗಲಿದೆ ಅನ್ನಲಾಗಿದ್ದು,ನೀರು ಖಾಲಿ ಮಾಡುವುದಕ್ಕೆ ನಾಲ್ಕೈದು ದಿನ ಬೇಕಾಗಲಿದೆ. ನೀರು ಖಾಲಿ ಮಾಡಿದ ನಂತರ ದುರಸ್ತಿ ಮಾಡಲು 7-8 ದಿನ ಬೇಕಾಗಬಹುದು.
ಈ ದುರಸ್ಥಿ ಕಾರ್ಯಕ್ಕೆ ಬೆಂಗಳೂರು, ಹೈದರಾಬಾದ್, ಚೆನ್ನೈ ನಿಂದ ತಜ್ಞರ ತಂಡ ಬರಲಿದ್ದು ಆ ನಂತರವೇ ದುರಸ್ತಿ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.