ಕಾಸರಗೋಡು : ದನಕ್ಕೆ ಆಹಾರ ಕೊಡಲು ಹೋದ ಸಂದರ್ಭದಲ್ಲಿ ದನ ಕೊಂಬಿನ ತಿವಿತಕ್ಕೆ ಒಳಗಾಗಿದ್ದ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಚೆರ್ವತೂರಿನಲ್ಲಿ ನಡೆದಿದೆ. ಮೃತರನ್ನು ಆನಿಕ್ಕೋಡಿ ನಿವಾಸಿ ಸಿ. ರಾಮಕೃಷ್ಣನ್ (54) ಎಂದು ಗುರುತಿಸಲಾಗಿದೆ.
ಮೊಗ್ರಾಲ್ ಪುತ್ತೂರು ಸರ್ಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ಇದೇ ಅವಧಿಯಲ್ಲಿ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಕಲಚೇತನ ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ ಶ್ರಮಿಸಿದ್ದರು.
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ರಾಮಕೃಷ್ಣನ್ ಕೇರಳ ರಾಜ್ಯದ ವಿಕಲ ಚೇತನ ಮಕ್ಕಳ ಕಲ್ಯಾಣಕ್ಕಾಗಿ ದುಡಿಯುತ್ತಿದ್ದರು. ವಿಕಲ ಚೇತನ ಮಕ್ಕಳಿಗಾಗಿ ಕಾಸರಗೋಡಿನಲ್ಲಿ ರಾಜ್ಯ ಮಟ್ಟದ ಕಲೋತ್ಸವವನ್ನು ಆಯೋಜಿಸಿ ಇವರು ಸಾಕಷ್ಟು ಸದ್ದು ಮಾಡಿದ್ದರು.
ಬುಧವಾರ ಮನೆಯ ಕೊಟ್ಟಿಗೆಯಲ್ಲಿ ದನಕ್ಕೆ ಆಹಾರ ನೀಡಲು ಹೋಗಿದ್ದ ಸಂದರ್ಭದಲ್ಲಿ ಹೊಟ್ಟೆಯ ಭಾಗಕ್ಕೆ ದನ ತಿವಿದಿದ್ದು, ದನ ಕೊಂಬು ಹೊಟ್ಟೆಯನ್ನು ಚುಚ್ಚಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕಣ್ಣೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇವರು ಮೃತಪಟ್ಟಿದ್ದಾರೆ.
Discussion about this post