ಬೆಂಗಳೂರು : SSLC ಪರೀಕ್ಷೆ ಮೇಲೆ ಆವರಿಸಿದ್ದ ಕರಿ ಮೋಡ ಕರಗಿದೆ. ಪರೀಕ್ಷೆ ನಡೆಯುತ್ತದೆಯೋ ಇಲ್ಲವೋ ಎಂದು ಆತಂಕ್ಕೀಡಾಗಿದ್ದ ವಿದ್ಯಾರ್ಥಿಗಳಿಗೆ ಹೈಕೋರ್ಟ್ ಗುಡ್ ನ್ಯೂಸ್ ಕೊಟ್ಟಿದೆ. ಹೀಗಾಗಿ ನಿಗದಿಯಂತೆ ಜುಲೈ 19 ಹಾಗೂ ಜುಲೈ 22 ರಂದು SSLC ಪರೀಕ್ಷೆ ಈಗಾಗಲೇ ನಿಗದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
SSLC ಪರೀಕ್ಷೆ ನಡೆಸುವ ಸಲುವಾಗಿ ರಾಜ್ಯ ಶಿಕ್ಷಣ ಇಲಾಖೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ಕೆಲವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿ SSLC ಪರೀಕ್ಷೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿದ್ದರು. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ ಕೂಡಾ ಜಾರಿ ಮಾಡಿತ್ತು.
ಈ ಬಗ್ಗೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರ ನೀಡಿದ ಉತ್ತರದಿಂದ ತೃಪ್ತಿಯಾಗಿದ್ದು, ಕೊರೋನಾ ನಿಯಮಗಳಡಿಯಲ್ಲಿ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಇದಕ್ಕೂ ಮುನ್ನ ಸರ್ಕಾರಿ ಪರ ವಕೀಲರು, ಪರೀಕ್ಷೆ ಯಾಕೆ ನಡೆಸಬೇಕು, ಹೇಗೆ ನಡೆಸುತ್ತೇವೆ ಅನ್ನುವ ಕುರಿತಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಶೇ1.48ರಷ್ಟಿದೆ. ಜೊತೆಗೆ ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ತಗ್ಗಿದೆ. ಹೀಗಾಗಿ ನಿಗದಿ ಪಡಿಸಿದ ಮಾನದಂಡದಡಿಯಲ್ಲೇ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.
ಈ ವೇಳೆ ತೀರ್ಪು ಪ್ರಕಟಿಸಿದ ನ್ಯಾ. ನಾಗರತ್ನ ಹಾಗೂ ನ್ಯಾ. ಸಂಜೀವ ಕುಮಾರ್ ಅವರ ದ್ವಿಸದಸ್ಯ ಪೀಠ, ಈಗಿರುವ ಪರಿಸ್ಥಿತಿಯಲ್ಲಿ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದೇ ಸೂಕ್ತ. ಹಾಗಂತ ಒತ್ತಾಯಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಬೇಡಿ,ಜೊತೆಗೆ ಸರ್ಕಾರ ರೂಪಿಸಿರುವ ಕೊರೋನಾ ನಿಯಮಗಳನ್ನು ಉಲ್ಲಂಘಿಸಬೇಡಿ ಎಂದು ಆದೇಶಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
Discussion about this post