ಬೆಂಗಳೂರು : ಕೊರೋನಾ ಮುನ್ನೆಚ್ಚರಿಕೆಗಳೊಂದಿಗೆ ಸೆಪ್ಟಂಬರ್ 6 ರಿಂದ ವಾರದಲ್ಲಿ ಐದು ದಿನ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಡಿಮೆ ಇರುವ ತಾಲೂಕುಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಅಂದಿದ್ದಾರೆ.
ಇನ್ನು ತರಗತಿ ಹಾಜರಾಗುವ ಮಕ್ಕಳು ಪಾಲಕರ, ಪೋಷಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯವಾಗಿದ್ದು, ಭೌತಿಕ ತರಗತಿಗಳ ಜೊತೆಗೆ ಆನ್ಲೈನ್ ತರಗತಿಗಳು ಕೂಡ ಮುಂದುವರೆಯಲಿದೆ.ಭೌತಿಕ ತರಗತಿಗೆ ಹಾಜರಾಗಲು ಹಿಂಜರಿಯುವ ಮಕ್ಕಳು ಆನ್ಲೈನ್ ತರಗತಿಗಳಲ್ಲಿ ಹಾಜರಾಗಬಹುದಾಗಿದೆ. ಆದರೆ ತರಗತಿಯಲ್ಲಿ ಮಕ್ಕಳು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ಸಚಿವರು ತಿಳಿಸಿದ್ದಾರೆರು.
ಈಗಾಗಲೇ ಆರಂಭವಾಗಿರುವ 9 ಮತ್ತು 10ನೇ ತರಗತಿ ಹಾಗೂ ಪಿಯು ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಗಸ್ಟ್ 23 ರಿಂದ 9, 10ನೇ ತರಗತಿ ಹಾಗೂ ಪಿಯು ಭೌತಿಕ ತರಗತಿಗಳು ಪುನಾರಂಭಗೊಂಡಿದ್ದು,ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಈ ಅವಧಿಯಲ್ಲಿ ಶಾಲೆಗೆ ಬಂದ 6 ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ಅದರಲ್ಲಿ 14 ಮಕ್ಕಳಿಗೆ ಮಾತ್ರ ಪಾಸಿಟಿವ್ ಬಂದಿದೆ. ತಜ್ಞರ ಇದು ಗಾಬರಿ ಪಡುವ ಸಂಖ್ಯೆಯಲ್ಲ ಅಂದಿದ್ದಾರೆ ಹೀಗಾಗಿ ಮಕ್ಕಳು, ಪಾಲಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ನಾಗೇಶ್ ವಿಶ್ವಾಸ ತುಂಬಿದ್ದಾರೆ.
ಸೆ.10ರ ಬಳಿಕ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಸಭೆ ನಡೆಯಲಿದ್ದು ಆ ಸಭೆಯಲ್ಲಿ 1ರಿಂದ 5ನೇ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಚರ್ಚೆ ನಡೆಯಲಿದೆ.
Discussion about this post