ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಇನ್ನೂ ಹಾವು ಏಣಿಯಾಟವಾಡುತ್ತಿದೆ. ಅದರಲ್ಲೂ ಕೇರಳದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಸೋಂಕು, ದಕ್ಷಿಣ ಕನ್ನಡ ಜಿಲ್ಲೆಗೆ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಕಳೆದ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿದೆ.
ಈ ಮೂಲಕ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,836ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 1,207, ಧಾರವಾಡದಲ್ಲಿ 342, ವಿಜಯಪುರ 228, ಕಲಬುರಗಿ 213 ಮತ್ತು ಬಳ್ಳಾರಿ 169 ಪ್ರಕರಣಗಳು ಪತ್ತೆಯಾಗಿದ್ದು, ಬ್ಲ್ಯಾಕ್ ಫಂಗಸ್ ನಿಂದ ಸಾವಿಗೀಡಾದವರ ಸಂಖ್ಯೆ 441ಕ್ಕೆ ಏರಿದೆ. ಈ ಪೈಕಿ ಅತೀ ಹೆಚ್ಚು ಸಾವು ಬೆಂಗಳೂರಿನಲ್ಲೇ ಸಂಭವಿಸಿದ್ದು 149 ಮಂದಿ ಬ್ಲ್ಯಾಕ್ ಫಂಗಸ್ ಗೆ ಬಲಿಯಾಗಿದ್ದಾರೆ. ನಂತರ ಧಾರವಾಡದಲ್ಲಿ 40, ಬಳ್ಳಾರಿಯಲ್ಲಿ 28, ದಕ್ಷಿಣ ಕನ್ನಡದಲ್ಲಿ 25 ಮತ್ತು ಕಲಬುರಗಿಯಲ್ಲಿ 24 ಮಂದಿ ಮೃತಪಟ್ಟಿದ್ದಾರೆ.
ನೆಮ್ಮದಿಯ ವಿಚಾರ ಅಂದ್ರೆ ಕೊರೋನಾ ಎರಡನೇ ಅಲೆ ಹೆಚ್ಚಾದಾಗ ನಾವು ನೋಡಿದ ಸಂಖ್ಯೆಗೆ ಹೋಲಿಸಿದರೆ, ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಕುಸಿಯುತ್ತಿದೆ. ಈ ನಡುವೆ ಬ್ಲ್ಯಾಕ್ ಫಂಗಸ್ ಗೆ ನಿಖರ ಕಾರಣ ಹುಡುಕಲು ತಜ್ಞರಿಗೆ ಸಾಧ್ಯವಾಗಿಲ್ಲ. ಕಡಿಮೆ ರೋಗನಿರೋಧಕ ಶಕ್ತಿ, ವೆಂಟಿಲೇಟರ್ ಮತ್ತು ಸ್ಟೀರಾಯ್ಡ್ ಗಳ ಅಧಿಕ ಬಳಕೆ ಬ್ಲ್ಯಾಕ್ ಫಂಗಸ್ ಗೆ ಕಾರಣವಾಗಿರಬಹುದು ಅನ್ನಲಾಗಿದೆ. ಇದೀಗ ಮೂರನೇ ಅಲೆಯ ಭಯ ಶುರುವಾಗಿದೆ. ಈ ಸಂದರ್ಭದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅತೀ ಅಗತ್ಯ.
Discussion about this post