ಬೆಂಗಳೂರು : ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆ, ಕರ್ನಾಟಕದ ನೆಲ ಜಲದ ಕುರಿತಂತೆ ಚರ್ಚಿಸಲು ಕರೆದಿದ್ದ ಅಧಿವೇಶನದಲ್ಲಿ ಶಾಸಕರ ವೈಯುಕ್ತಿಕ ಸಮಸ್ಯೆಯ ಬಗ್ಗೆ ಚರ್ಚೆ ನಡೆದ ಘಟನೆ ಬುಧವಾರ ಜರುಗಿದೆ.
ಟೋಲ್ ಗಳಲ್ಲಿ ಶಾಸಕರಿಗೆ ಕಿರಿ ಕಿರಿ ನೀಡಲಾಗುತ್ತಿದೆ ಎಂದು ವಿಷಯ ಪ್ರಸ್ತಾಪಿಸಿದ ಶಾಸಕ ಅನ್ನದಾನಿ, ಟೋಲ್ ಗಳಲ್ಲಿ ವಿಐಪಿಗಳ ಸಂಚಾರಕ್ಕೆ ಪ್ರತ್ಯೇಕ ಪಥವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವರು, ವಿಐಪಿ ಲೇನ್ ಅಂತಾ ಇಲ್ಲ, ಅಂಬ್ಯುಲೆನ್ಸ್ ಗಳು ಓಡಾಡುವ ಪಥದಲ್ಲಿ ವಿಐಪಿಗಳು ಓಡಾಟ ನಡೆಸಬಹುದು ಅಂದರು.
ಸಚಿವರ ಉತ್ತರದಿಂದ ತೃಪರಾಗದ ಕೆ ಅನ್ನದಾನಿ ಶಾಸಕರಿಗೆ ಪಾಸ್ ಕೊಟ್ಟಿದ್ದೀರಿ, ಯಾಕೆ ಕೊಟ್ಟಿದ್ದೀರಿ, ಪಾಸ್ ಗಳನ್ನು ಟೋಲ್ ಗಳಲ್ಲಿ ತೋರಿಸಿದ್ರೆ ಸ್ಕ್ಯಾನ್ ಮಾಡಬೇಕು ಅಂತಾರೆ, ಐಡಿ ಕಾರ್ಡ್ ತೋರಿಸಿ ಅಂತಾರೆ. ನಾನೇ ಶಾಸಕ ಕೂತಿದ್ದೇನೆ ಅಂದರೂ ಸಿಬ್ಬಂದಿಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ನಮ್ಮ ಸಮಯ ವ್ಯರ್ಥವಾಗುತ್ತಿದೆ. ನಮಗೆ ಕಿರಿ ಕಿರಿಯಾಗುತ್ತಿದೆ. ಸಮಸ್ಯೆಯಾಗುತ್ತಿದೆ ಎಂದು. ತಕ್ಷಣ ಸಮಸ್ಯೆ ಬಗೆ ಹರಿಸಿ ಅಂದರು.
ಈ ಬಗ್ಗೆ ಸಚಿವರು ಸಮಸ್ಯೆ ಬಗ್ಗೆ ಹರಿಸುವ ಬಗ್ಗೆ ಉತ್ತರಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಸಕ ಶಿವಲಿಂಗೇಗೌಡರು, ನಮಗೂ ಮರ್ಯಾದೆ ಇದೆ, ಕಾಸು ಕೊಟ್ಟು ಹೋಗ್ತಿವಿ. ಸುಮ್ನೆ ಪಾಸ್ ಗಳು ಯಾಕೆ ಬೇಕು ವಾಪಾಸ್ ತೆಗೆದುಕೊಳ್ಳಿ ಅಂದರು. ಅಷ್ಟಕ್ಕೆ ಮಾತು ನಿಲ್ಲಿಸದ ಶಿವಲಿಂಗೇಗೌಡರು, ಜನಪ್ರತಿನಿಧಿಗಳಿಗೆ ಪ್ರತ್ಯೇಕ ಲೇನ್ ನಿರ್ಮಿಸಿಕೊಡಿ ಅನ್ನುವ ಬೇಡಿಕೆ ಇಟ್ಟರು.

ಆಗ್ಲೂ ಈ ವಿಷಯದ ಬಗ್ಗೆ ಅನ್ನದಾನಿ ಮತ್ತೆ ಮಾತು ಮುಂದುವರಿಸಿದರು, ಇದು ಸ್ಪೀಕರ್ ಕಾಗೇರಿಯವರ ಸಹನೆ ಕೆಡಿಸಿತು. ಆಗ ಗರಂ ಆಗಿಯೇ ಮಾತನಾಡಿದ ಸ್ಪೀಕರ್, 6 ಕೋಟಿ ಜನರ ಬಗ್ಗೆ ನಾವು ಚರ್ಚಿಸಬೇಕಿದೆ. 224 ಶಾಸಕರ ಸಮಸ್ಯೆ ಇಲ್ಲಿ ವಿಷಯವಲ್ಲ. ಈ ಬಗ್ಗೆ ನನ್ನದೇ ಕಚೇರಿಯಲ್ಲೇ ಸಭೆ ಕರೆದು ಸಮಸ್ಯೆ ಬರೆ ಹರಿಸೋಣ ಎಂದು ಕಲಾಪ ಮುಂದುವರಿಸಿದರು.
ಜನಪ್ರತಿನಿಧಿಗಳ ಈ ಬೇಡಿಕೆ ಅಚ್ಚರಿ ಮೂಡಿಸಿದೆ. ದೇಶದಲ್ಲಿ ಜನಪ್ರತಿನಿಧಿಗೊಂದು, ಜನರಿಗೊಂದು ಕಾನೂನು ಇಲ್ಲ, ಅಂದ ಮೇಲೆ ಟೋಲ್ ಗಳಲ್ಲೂ ಜನ ಸಾಮಾನ್ಯರಂತೆ ಜನಪ್ರತಿನಿಧಿಗಳು ಹೋಗಬೇಕು ತಾನೇ. ಇನ್ನು ಜನಪ್ರತಿನಿಧಿಗಳು ಅಂದ ಮೇಲೆ ಐಡಿ ಕಾರ್ಡ್ ತೋರಿಸಬಾರದು ಅಂತಾ ಇದೆಯೇ, ಶಾಸಕರ ಹೆಸರಿನಲ್ಲಿ ದುರುಪಯೋಗವಾಗಬಾರದು ಅನ್ನುವ ಕಾರಣಕ್ಕೆ ಟೋಲ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಯಾದವನು ಜನರ ಸೇವಕನಾಗಿರಬೇಕೇ ಹೊರತು ವಿಐಸಿ ಸಂಸ್ಕೃತಿಯ ದಾಸನಾಗಬಾರದು.

Discussion about this post