ರಾಜ್ಯ ಸರ್ಕಾರದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ
ಸಮಾನತೆ, ಭಾತೃತ್ವದ ಸಂವಿಧಾನದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತುಮಕೂರಿನಲ್ಲಿ ತಿಳಿಸಿದ್ದಾರೆ.ಮಾನವ ಸರಪಳಿಯಲ್ಲಿ ರಾಜ್ಯದ ವಿವಿಧೆಡೆ ೨೫ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂದು ತೋರಿಸಿದ್ದಾರೆ ಎಂದರು.
ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯಿಂದ ಕಿತ್ತೂರ ತಾಲೂಕಿನ ತೇಗೂರ ಗ್ರಾಮದವರೆಗೆ ೧೪೫ ಕಿ.ಮೀ ಮಾನವ ಸರಪಳಿ ನಿರ್ಮಿಸಿ ಮಾನವ ಬಂಧುತ್ವ ಯಶಸ್ವಿಗೊಳಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿದರು.
ಚಿಕ್ಕಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ರಾಷ್ಟ್ರವಾಗಿ ಭಾರತ ಹೊರಹೊಮ್ಮಿ ಯಶಸ್ವಿಯಾಗಿ ಮುಂದುವರೆಯುತ್ತಿರುವುದಕ್ಕೆ ಸಂವಿಧಾನವೇ ಕಾರಣ ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲಾಡಳಿತದ ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ, ಮಕ್ಕಳಿಗೆ, ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ೧೪೫ ಕಿಲೋಮೀಟರ್ ಉದ್ದದ ಮಾನವ ಸರಪಳಿಯಲ್ಲಿ ನಿರ್ಮಿಸಲಾಗಿದ್ದು, ಒಂದೂವರೆ ಲಕ್ಷ ಜನರು ಭಾಗವಹಿಸಿದ್ದರು. ಮೊಳಕಾಲ್ಮೂರು ತಾಲೂಕಿನ ಮೇಲಿಕ ಕಣಿವೆ ಗ್ರಾಮದಿಂದ ಚಳ್ಳಕೆರೆ ಮಾರ್ಗವಾಗಿ ಹಿರಿಯೂರಿನ ಜವಗೊಂಡನಹಳ್ಳಿ ಗ್ರಾಮದವರೆಗೂ ಮಾನವ ಸರಪಳಿ ರಚಿಸಲಾಗಿತ್ತು.
ವಿಜಯಪುರದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ರಚಿಸಿದ್ದ ಮಾನವ ಸರಪಳಿಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಮಾಗಡಿ ಕೈಮರ ಗ್ರಾಮದಿಂದ ತರೀಕೆರೆ ತಾಲೂಕು ಎಂ.ಸಿ ಹಳ್ಳಿವರಗೆ ಸುಮಾರು ೯೨ ಕಿಲೋಮೀಟರ್ ಉದ್ದದ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ೪೬ ಕಿಲೋ ಮೀಟರ್ ಉದ್ದ ಬೃಹತ್ ಮಾನವ ಸರಪಳಿ ರಚಿಸಲಾಗಿತ್ತು.
ಸಂಡೂರು ತಾಲೂಕಿನ ಕುರೆಕುಪ್ಪದಿಂದ ಚಿತ್ರದುರ್ಗ ಜಿಲ್ಲೆಯ ಮೇಲಿನ ಕಣವೆ ಗ್ರಾಮದವರೆಗೆ ೩೫ ಸಾವಿರಕ್ಕೂ ಹೆಚ್ಚು ಜನರು ಮಾನವ ಸರಪಳಿ ರಚಿಸಿದ್ದರು. ರಾಮನಗರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಯಶವಂತ್ ವಿ ಗುರುಕಾರ್ ಉದ್ಘಾಟಿಸಿದರು. ಭಾರತದ ಸಂವಿಧಾನ ಪೀಠಿಕೆಯನ್ನು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಬೋಧಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನಾಡಿನ ಜನರು ಕೈ ಜೋಡಿಸಿದಾಗ ಮಾತ್ರ ರಾಜ್ಯ, ರಾಷ್ಟ್ರ ಪ್ರಗತಿ ಹೊಂದಲು ಸಾಧ್ಯ ಎಂದು ಆಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವಾದ ಇಂದು ೧೩೦ ಕಿಮೀ ಉದ್ದದ ಮಾನವ ಸರಪಳಿ ರಚಿಸಿ ಸಂವಿಧಾನದ ಮಹತ್ವವನ್ನು ಸಾರಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹೆಜಮಾಡಿ ಟೋಲ್ಗೇಟ್ನಿಂದ ಸುಳ್ಯದ ಸಂಪಾಜೆ ಗೇಟ್ವರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಸಂವಿಧಾನದ ಪೀಠಿಕೆಯ ಪ್ರಮಾಣ ಸ್ವೀಕರಿಸಿ, ಮಾನವ ಸರಪಳಿ ರಚಿಸಿ ದೇಶದ ಸಮಗ್ರತೆ ಮತ್ತು ಏಕತೆಯನ್ನು ಸಾರಿದರು.
ಮೈಸೂರಿನಲ್ಲಿ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಿಸಲಾಯಿತು. ಬೆಳಿಗ್ಗೆ ತಾಲೀಮು ಮುಗಿಸಿ ಅರಮನೆಗೆ ವಾಪಸಾಗುತ್ತಿದ್ದ ದಸರಾ ಮಹೋತ್ಸವದ 13 ಆನೆಗಳನ್ನು ಕೂಡ ಸಾಲಿನಲ್ಲಿ ನಿಲ್ಲಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಕ್ಕೆ ವಿಶೇಷ ಮೆರುಗು ನೀಡಲಾಗಿತ್ತು.