ಚೆನೈ : ಮೇಕೆದಾಟುನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಯತ್ನಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತಮಿಳುನಾಡು ಅಡ್ಡಗಾಲು ಹಾಕುತ್ತಿದೆ. ಪರಿಸ್ಥಿತಿ ಹೇಗಿದೆ ಅಂದ್ರೆ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ತಮಿಳುನಾಡಿನ ಅಪ್ಪಣೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನ್ಯಾಯಾಲಯಗಳು ಯೋಜನೆಗೆ ಹಸಿರು ನಿಶಾನೆ ತೋರಿದ ಮೇಲೂ ತೆಪ್ಪಗಿರಬೇಕಾದ ತಮಿಳುನಾಡು ಮತ್ತೆ ಕ್ಯಾತೆ ತೆಗೆದಿದೆ.
ಹೇಗಾದರೂ ಸರಿ ಮೇಕೆದಾಟು ಯೋಜನೆ ನಿಲ್ಲಿಸಿಯೇ ಸಿದ್ದ ಎಂದು ಪಣತೊಟ್ಟಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಇಂದು ರಾಜ್ಯದ ಸರ್ವಪಕ್ಷಗಳ ಸಭೆ ಕರೆದಿದ್ದರು. ಸಭೆಯಲ್ಲಿ ಮೇಕೆದಾಟುನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಹೊಸ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಯನ್ನು ಖಂಡಿಸಲಾಗಿದ್ದು, ಇದಕ್ಕೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ನಿರ್ಧಾರ ಕೈಗೊಳ್ಳಲಾಗಿದೆ.
ಮಾತ್ರವಲ್ಲದೆ ಕರ್ನಾಟಕದ ವಿರುದ್ಧ ಕೇಂದ್ರಕ್ಕೆ ತಮಿಳುನಾಡಿನಿಂದ ಸರ್ವಪಕ್ಷಗಳ ನಿಯೋಗ ತೆರಳಲಿದ್ದು, ಇದರ ಜೊತೆ ಜೊತೆಗೆ ಕಾನೂನು ಹೋರಾಟ ನಡೆಸಲು ತಮಿಳುನಾಡು ನಿರ್ಧರಿಸಿದೆ.
ಈ ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿನ ರೈತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಅನ್ನುವುದು ತಮಿಳುನಾಡಿನ ವಾದ. ಆದರೆ ಕರ್ನಾಟಕ ಇದರಿಂದ ತಮಿಳುನಾಡಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸಾಬೀತುಪಡಿಸಿದೆ. ಹಾಗಿದ್ದ ಮೇಲೂ ತಮಿಳುನಾಡು ಕರ್ನಾಟಕ ಅಭಿವೃದ್ಧಿಗೆ ಅಡ್ಡಗಾಲು ಮುಂದಾಗಿದೆ.
ಇದೀಗ ತಮಿಳುನಾಡು ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಾಗಿದೆ. ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ಧೈರ್ಯವಿದ್ರೆ ತಮಿಳುನಾಡು ಸರ್ಕಾರದ ವಿರುದ್ಧ ಒತ್ತಡ ತರಬಹುದಾಗಿದೆ. ತಮಿಳುನಾಡಿನಲ್ಲಿ ಡಿಎಂಕೆಯೊಂದಿಗೆ ಕಾಂಗ್ರೆಸ್ ಮೈತ್ರಿಯನ್ನು ಹೊಂದಿದೆ. ಹೀಗಾಗಿ ಮೇಕೆದಾಟು ಯೋಜನೆಗಿರುವ ಅಡ್ಡಿಯನ್ನು ನಿವಾರಿಸಬಲ್ಲ ತಾಕತ್ತು ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರಿಗಿದೆ. ಅದಕ್ಕೆ ಮನಸ್ಸು ಮಾಡಬೇಕಷ್ಟೇ.
ಹಾಗಂತ ಬಿಜೆಪಿಗೆ ಜವಾಬ್ದಾರಿ ಇಲ್ಲವೇ ಅಂದ್ರೆ ಖಂಡಿತಾ ಇದೆ. ಮೇಲೂ, ಕೆಳಗೂ ನಮ್ದೇ ಸರ್ಕಾರ ಎಂದು ಬಿಜೆಪಿ ಬೀಗುತ್ತಿದೆ. ಹೀಗಾಗಿ ತಮಿಳುನಾಡು ಸರ್ವಪಕ್ಷ ನಿಯೋಗ ಒಯ್ಯುವ ಮುನ್ನ, ಕರ್ನಾಟಕ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗವನ್ನು ಒಯ್ದು, ತಮಿಳುನಾಡು ರಗಳೆಗೆ ಸೊಪ್ಪು ಹಾಕಬೇಡಿ ಎಂದು ಮನವಿ ಮಾಡಬೇಕಿದೆ. ಜೊತೆಗೆ ಮೇಕೆದಾಟು ಯೋಜನೆಯ ಅಗತ್ಯ, ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ ಅನ್ನುವುದನ್ನು ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡುವ ಹೊಣೆಗಾರಿಕೆ ಯಡಿಯೂರಪ್ಪನವರ ಮೇಲಿದೆ.
Discussion about this post