ಜೆಡಿಎಸ್ ನ ಭದ್ರಕೋಟೆಗಳು ಛಿದ್ರವಾಗಲಾರಂಭಿಸಿದೆ. ಹೀಗಾಗಿ ದಳಪತಿಗಳು ರಾಜಧಾನಿಯಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ
ಬೆಂಗಳೂರು : ಜೆಡಿಎಸ್ ನಡೆಸಿದ ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿತ್ತು. ನೆಲಮಂಗಲದಲ್ಲಿ ನಡೆಸಿದ ಸಮಾವೇಶವೇ ಅದಕ್ಕೆ ಸಾಕ್ಷಿ. ಆದರೆ ಇದು ಎಷ್ಟರ ಮಟ್ಟಿಗೆ ಮತವಾಗಿ ಪರಿವರ್ತನೆಯಾಗುತ್ತದೆ ಅನ್ನುವುದು ಈಗಿರುವ ಪ್ರಶ್ನೆ. ಈ ನಡುವೆ ಜಲಧಾರೆಯ ಯಶಸ್ಸಿನ ಬೆನ್ನಲ್ಲೇ ಬೆಂಗಳೂರಿಗೆ ಸೀಮಿತವಾಗಿ ಜನತಾ ಮಿತ್ರ ಕಾರ್ಯಕ್ರಮ ಹಮ್ಮಿಕೊಳ್ಳಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಈ ಸಂಬಂಧ ಬುಧವಾರ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿರುವ ಕುಮಾರಸ್ವಾಮಿ, ಜನತಾ ಮಿತ್ರ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಗೊಳಿಸಿದರು. ನೆಲಮಂಗಲ ಸಮಾವೇಶ ರೀತಿಯಲ್ಲಿ ಜನತಾ ಮಿತ್ರ ಕೂಡಾ ಸದ್ದು ಮಾಡಬೇಕು ಎಂದು ಮುಖಂಡರಿಗೆ ಸೂಚನೆ ಕೂಡಾ ಕೊಡಲಾಗಿದೆ.
ಜನತಾ ಮಿತ್ರ ಕಾರ್ಯಕ್ರಮಕ್ಕಾಗಿ 15 ಎಲ್ಇಡಿ ವಾಹನಗಳನ್ನು ಸಿದ್ದಗೊಳಿಸಲಾಗಿದ್ದು, ಒಂದು ವಾಹನ ಎರಡು ಕ್ಷೇತ್ರಗಳಿಗೆ ತೆರಳಲಿದೆ. ಪ್ರತಿಯೊಂದು ವಾಹನಕ್ಕೆ ಶಾಸಕರು ಅಥವಾ ಹಿರಿಯ ಮುಖಂಡರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದ್ದು, ಜೆಡಿಎಸ್ ಕೊಟ್ಟಿರುವ ಕೊಡುಗೆಗಳನ್ನು ಮನೆ ಮನೆಗೆ ತಲುಪಿಸುವಂತೆ ಸೂಚಿಸಲಾಗಿದೆ.
ಬೆಂಗಳೂರಿನ ಪ್ರತಿಯೊಂದು ವಾರ್ಡ್ ಗಳಿಗೆ ತೆರಳರುವ ಜನತಾ ಮಿತ್ರ ತಂಡ,ಎಲ್ಲಾ ವಾರ್ಡ್ ಗಳಲ್ಲಿ ಸಭೆ ನಡೆಸಲಿದೆ. ಜೊತೆಗೆ ಮುಂದಿನ ಸರ್ಕಾರ ಹೇಗಿರಬೇಕು ಅನ್ನುವ ಸಲಹೆ, ಅಭಿಪ್ರಾಯಗಳನ್ನು ಜನತೆಯಿಂದ ಪಡೆಯುವ ಬಗ್ಗೆಯೂ ತಿಳಿಸಲಾಗಿದೆ. ಈ ಮೂಲಕ ಜೆಡಿಎಸ್ ಪಕ್ಷವನ್ನು ಮನೆ ಮನಕ್ಕೆ ತಲುಪಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಹಿಂದಿನ ತೀರ್ಮಾನದ ಪ್ರಕಾರ ಜೂನ್ 22 ಕ್ಕೆ ಈ ಕಾರ್ಯಕ್ರಮ ಪ್ರಾರಂಭವಾಗಬೇಕಾಗಿತ್ತು. ಬದಲಾಗಿ ನಾಳೆಯಿಂದ ಅಂದರೆ ಜುಲೈ 1 ರಿಂದ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
Discussion about this post