ಕೇರಳ : ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ನೀಡಿದ್ದ 80ಜಿ ಮಾನ್ಯತೆಯನ್ನು ತೆರಿಗೆ ಇಲಾಖೆ ರದ್ದುಗೊಳಿಸಿದೆ. ಈಗಾಗಲೇ ಪಿಎಫ್ಐ ಸಂಘಟನೆ ವಿರುದ್ಧ ಭಯೋತ್ಪಾದಕ ಚಟುವಟಿಕೆಯ ಆರೋಪಗಳು ಕೇಳಿ ಬಂದಿದೆ. ಸಮಾಜಸೇವೆ ಹೆಸರಿನಲ್ಲಿ ನಿಯಮ ಬಾಹಿರ ಚಟುವಟಿಕೆ ನಡೆಸುತ್ತಿದೆ ಅನ್ನುವ ಆರೋಪವಿದೆ.
2006ರಲ್ಲಿ ಕೇರಳದಲ್ಲಿ ಆರಂಭವಾದ ಪಿಎಫ್ಐ ದೆಹಲಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿದೆ. ಕಾನೂನು ಬಾಹಿರ ಕೃತ್ಯಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾದಳ ತನಿಖೆ ನಡೆಸುತ್ತಿದೆ.
ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳಿಗೆ ಆದಾಯ ತೆರಿಗೆ ಇಲಾಖೆ 80ಜಿ ಅಡಿಯಲ್ಲಿ ಕೆಲವೊಂದು ವಿನಾಯತಿಗಳನ್ನು ನೀಡುತ್ತದೆ. ಈ ಪ್ರಕಾರ ಈ ಸೌಲಭ್ಯ ಪಡೆದ ದತ್ತಿ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ದೇಣಿಗೆ ನೀಡುವ ವ್ಯಕ್ತಿಗಳಿಗೆ ತೆರಿಗೆ ಕಡಿತದ ಪ್ರಯೋಜನ ದೊರೆಯುತ್ತದೆ. ಹಾಗೂ ಪಡೆದ ದೇಣಿಗೆಗೆ ತೆರಿಗೆ ಕಟ್ಟುವ ಅಗತ್ಯವೂ ಇರುವುದಿಲ್ಲ.
ಆದರೆ ಸಮಾಜಸೇವೆಯ ಹೆಸರಿನಲ್ಲಿ ಪಿಎಫ್ಐ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದೆ. ಸಮಾಜ ಸ್ವಾಸ್ಥ್ಯ ಕೆಡಿಸುತ್ತಿದೆ ಅನ್ನುವ ಕಾರಣ ನೀಡಿ 80ಜಿಯನ್ನು ರದ್ದುಗೊಳಿಸಲಾಗಿದೆ. ಹೀಗಾಗಿ ಇನ್ನು ಮುಂದೆ ತಾನು ಪಡೆಯುವ ಎಲ್ಲಾ ದೇಣಿಗೆಗಳಿಗೆ ಪಿಎಫ್ಐ ತೆರಿಗೆ ಕಟ್ಟಬೇಕಾಗುತ್ತದೆ. ಅಷ್ಟೇ ಅಲ್ಲದೆ ಪಿಎಫ್ಐ ಗೆ ದೇಣಿಗೆ ನೀಡಿದವರಿಗೂ ತೆರಿಗೆ ವಿನಾಯತಿ ದೊರೆಯುವುದಿಲ್ಲ.
Discussion about this post