ಬೆಂಗಳೂರು : ವಿದ್ಯಾರ್ಥಿಗಳು ನಿರೀಕ್ಷೆಯಿಂದ ಕಾಯುತ್ತಿದ್ದ SSLC ಪರೀಕ್ಷೆಯ ದಿನಾಂಕ ಪ್ರಕಟಗೊಂಡಿದೆ. ಜುಲೈ 19 ಹಾಗೂ ಜುಲೈ 22 ರಂದು ಪರೀಕ್ಷೆಗಳು ನಡೆಯಲಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕೇವಲ 2 ದಿನಗಳ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ದತೆಗಳನ್ನು ಕೂಡಾ ಮಾಡಿಕೊಡಲಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಬಾರಿಯೂ ವಿದ್ಯಾರ್ಥಿ ಸ್ನೇಹಿ, ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪರೀಕ್ಷಾ ಕೇಂದ್ರಗಳನ್ನು ರಚಿಸಿದ್ದೇವೆ ಅಂದಿದ್ದಾರೆ.
ಒಂದು ಕೊಠಡಿಯಲ್ಲಿ 12 ಮಂದಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದ್ದು, ಪರೀಕ್ಷಾ ಕಾರ್ಯಕ್ಕೆ ನೇಮಕಗೊಳ್ಳುವ ಎಲ್ಲಾ ಸಿಬ್ಬಂದಿಗಳು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ. ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ಕಾಳಜಿ ವಹಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಲಾಗಿದೆ.
ಇನ್ನು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎನ್ 95 ಮಾಸ್ಕ್ ಕಡ್ಡಾಯ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗ ತಾಂತ್ರಿಕ ಸಮಿತಿಯ ವರದಿಯನ್ನು ಆಧರಿಸಿ ಸರ್ಜಿಕಲ್ ಮಾಸ್ಕ್ ಅಥವಾ ಒಳ್ಳೆಯ ಗುಣಮಟ್ಟದ ಬಟ್ಟೆ ಮಾಸ್ಕ್ ಸಾಕು ಎಂದು ಹೇಳಲಾಗಿದೆ. ಆದರೆ ಕೊರೋನಾ ಸೋಂಕಿನ ಲಕ್ಷಣಗಳಿರುವ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳಿಗೆ ಎನ್ 95 ಮಾಸ್ಕ್ ಕಡ್ಡಾಯವಾಗಿದ್ದು, ಅಗತ್ಯ ಬಿದ್ರೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಫೇಸ್ ಶೀಲ್ಡ್ ಧರಿಸಬೇಕು ಎಂದು ಸೂಚಿಸಲಾಗಿದೆ.
ಕೊರೋನಾ ಸೋಂಕಿಗೆ ತುತ್ತಾಗಿರುವ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಯಸಿದ್ರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಪರೀಕ್ಷಾ ಕೇಂದ್ರ ಪ್ರಾರಂಭಿಸುವ ಐತಿಹಾಸಿಕ ನಿರ್ಧಾರವನ್ನು ಶಿಕ್ಷಣ ಇಲಾಖೆ ತೆಗೆದುಕೊಂಡಿದೆ.
Discussion about this post