ಕಿಚ್ಚ ಸುದೀಪ್ ಮೊನ್ನೆ ಮಾಡಿದ್ದ ಬಳೆ-ಕಡಗದ ಟ್ವೀಟ್ ಭಾರೀ ಸುದ್ದಿಯಾಗಿ ಮಹಿಳೆಯರಿಗೆ ಸುದೀಪ್ ಅವಮಾನ ಮಾಡಿದ್ದಾರೆ ಎಂದು ಸಾಕಷ್ಟು ಟೀಕೆಗಳು ಕೇಳಿಬಂದವು.
ಈ ಬಗ್ಗೆ ಖಾಸಗಿ ಸುದ್ದಿವಾಹಿನಿ ಜೊತೆ ಸಂದರ್ಶನ ವೇಳೆ ಪ್ರತಿಕ್ರಿಯೆ ನೀಡಿದ ಅವರು, ನಾನು ಟ್ವಿಟ್ಟರನ್ನು ದುರುಪಯೋಗಪಡಿಸಿಕೊಂಡಿಲ್ಲ. ನನ್ನ ಮನಸ್ಸಿನಲ್ಲಿರುವುದನ್ನು ಅಲ್ಲಿ ಹೇಳಿಕೊಂಡಿದ್ದೇನೆ. ನನಗೆ ಅನ್ನಿಸಿದ್ದನ್ನು ಟ್ವಿಟ್ಟರ್ ಬಿಟ್ಟರೆ ಬೇರೆ ಎಲ್ಲಿ ಹೇಳಿಕೊಳ್ಳಲಿ ಎಂದು ಕೇಳಿದರು.
ನಾನು ಯಾರ ತಂಟೆಗೂ ಹೋಗಲ್ಲ. ನನ್ನ ಸಿನಿಮಾ ಬಗ್ಗೆ ನಾನು ಧ್ವನಿ ಎತ್ತದೇ ಇನ್ನು ಯಾರು ಮಾತನಾಡುತ್ತಾರೆ. ನಾನು ನನ್ನ ನಿರ್ಮಾಪಕರ ಪರವಾಗಿ ನಿಂತಿದ್ದೇನೆ. ಅದರಲ್ಲಿ ನನಗೆ ಯಾವುದೇ ತಪ್ಪು ಕಾಣಿಸುತ್ತಿಲ್ಲ. ಟ್ವಿಟ್ಟರ್ ನಲ್ಲಿ ನಾನು ಒಳ್ಳೆಯದನ್ನು ಹೇಳಿದ್ದೇನೆ. ನನಗೆ ಏನು ಹೇಳಬೇಕು ಎಂದು ಅನಿಸಿತೋ ಅದನ್ನು ಹೇಳುತ್ತೇನೆ. ನನ್ನ ಉದ್ದೇಶ ಸರಿಯಲ್ಲ ಎಂದರೆ ನನಗೆ ಗೊತ್ತಾಗುತ್ತೆ. ನಾನು ವೈಯಕ್ತಿವಾಗಿ ಟ್ವೀಟ್ ಮಾಡಿಲ್ಲ. ನನ್ನ ಸಿನಿಮಾಗಾಗಿ ಟ್ವೀಟ್ ಮಾಡಿದ್ದೇನೆ ಎಂದು ಹೇಳಿದರು.
ನಾನು ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ ಬಳೆಯಲ್ಲ ಎಂಬ ಟ್ವೀಟ್ ವಿಚಾರವಾಗಿ ಮಾತನಾಡಿದ ಕಿಚ್ಚ, ಕೆಲ ದಿನಗಳ ಹಿಂದೆ ನನಗೆ ಕೆಲ ಸಂದೇಶಗಳು ಬಂದಿದ್ದವು. ಅದರಲ್ಲಿ ನಿಮ್ಮ ಸ್ನೇಹಿತರಿಗೆ ಬಳೆ ಹಾಕಿಕೊಂಡು ಕುಳಿತುಕೊಳ್ಳಲು ಹೇಳಿ ಎಂದು ಕೆಲವರು ಹೇಳಿದ್ದರು. ಅದಕ್ಕಾಗಿ ನಾನು, ನಾವು ಹಾಕಿರುವುದು ಬಳೆಯಲ್ಲ ಕಡಗ ಎಂದು ಹೇಳಿದ್ದೆ ಅಷ್ಟೇ. ನನಗೆ ಬಳೆಯ ಮೇಲೆ ತುಂಬಾ ಗೌರವವಿದೆ. ನನ್ನ ತಾಯಿ ಕೂಡ ಬಳೆ ಹಾಕುತ್ತಾರೆ. ನಾನು ಇಲ್ಲಿ ಯಾರಿಗೂ ಅರ್ಥ ಮಾಡಿಸಲು ಹುಟ್ಟಿಲ್ಲ. ನನ್ನ ಜೀವನ ಚೆನ್ನಾಗಿದ್ದು, ಕನ್ನಡಿ ನನ್ನ ನೋಡಿ ನಗದೆ ಇದ್ದರೆ ಸಾಕು ಎಂದರು.
Discussion about this post