18 C
Bengaluru
Saturday, January 16, 2021

ಡೇಂಜರ್ ಸುಂದರಿ – ಮನೆ ಬಾಡಿಗೆ ಕಟ್ಟಲು ಹನಿಟ್ರ್ಯಾಪ್ ಕಾಸು

Must read

ಈ ಫೇಸ್ ಬುಕ್ ನಲ್ಲಿ ಸುಂದರಿಯ ಸಂದೇಶ ಬಂದರೆ ಎಚ್ಚರವಾಗಿರಿ ಎಂದು ಪೊಲೀಸರು ಹಲವು ಬಾರಿ ಹೇಳಿದ್ದಾರೆ. ಆದರೆ ಮಂದಿ ಕೇಳಬೇಕಲ್ವ. ಕೊನೆಗೆ ಕೈ ಸುಟ್ಟುಕೊಳ್ಳುತ್ತಾರೆ. ಅಂಡು ಸುಟ್ಟ ಬೆಂಕಿನಂತೆ ಪೊಲೀಸ್ ಠಾಣೆಯಲ್ಲಿ ಹೋಗಿ ಕೂರುತ್ತಾರೆ.

ಈ ಹನಿಟ್ರ್ಯಾಪ್ ಅನ್ನು ಬಲೆಯೊಳಗೆ ಬಿದ್ದ ಅನೇಕ ಮಂದಿ ಇಂದಿಗೂ ಹೊರಬರಲಾರದೆ ವಿಲ ವಿಲ ಒದ್ದಾಡುತ್ತಿದ್ದಾರೆ. ಎಚ್ಚರವಾಗಿರಿ ಎಂದು ಖಾಕಿಗಳು ಹೇಳಿದ ಮಾತನ್ನು ನಿರ್ಲಕ್ಷ್ಯ ಮಾಡಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಹೀಗೆ ಹನಿಟ್ರ್ಯಾಪ್ ದಂಧೆ ಮಾಡುತ್ತಿದ್ದ ಮತ್ತೊಂದು ಜಾಲವನ್ನು ಪೊಲೀಸರು ಬೇಧಿಸಿದ್ದಾರೆ.

ಆಕೆಯ ಹೆಸರು ಅರ್ಪಿತಾ(24). ತುರುವೇಕೆರೆಯ ಮೂಲದ ಈಕೆಗೆ 17 ವರ್ಷದಲ್ಲೇ ಮದುವೆಯಾಗಿತ್ತು. ಸುಂದರ ಸಂಸಾರದಲ್ಲಿ ಮಕ್ಕಳಿಬ್ಬರಿದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ. ಮಕ್ಕಳು ಹಾಗೂ ಪತಿಯನ್ನು ಬಿಟ್ಟು ತುಮಕೂರಿನಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳು. ಈ ವೇಳೆ ಟ್ಯಾಬ್ಲೋಯ್ಡ್ ಪತ್ರಿಕೆಯೊಂದರಲ್ಲಿ ಕ್ರೈ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್ ಎಂಬವನ ಪರಿಚಯವಾಗಿದೆ. ಆಕೆಯೊಂದಿಗೆ ಅನೈತಿಕ ಸಂಬಂಧಕ್ಕೆ ಬಿದ್ದ ಎರಡು ಮಕ್ಕಳ ತಾಯಿ ಬೆಂಗಳೂರಿಗೆ ಶಿಫ್ಟ್ ಆದ್ಲು.

ಹೊಸದಾಗಿ ಮದುವೆಯಾದ ಜೋಡಿ ಎಂದು ಸೋಲದೇವನಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಹಿಡಿದರು.  ವಿಚಿತ್ರ ಅಂದರೆ ಬಾಡಿಗೆ ಮುಂಗಡ ಮತ್ತು ಬಾಡಿಗೆ ಎರಡನ್ನೂ ಕೊಡದೆ ಹಾಲು ಉಕ್ಕಿಸಿಕೊಂಡಿದ್ದರು. ಮನೆ ಮಾಲೀಕನನ್ನು ಅದು ಹೇಗೆ ಬಕ್ರ ಮಾಡಿದರೋ ಗೊತ್ತಿಲ್ಲ.

ಈ ಅರ್ಪಿತಾ ಅದೆಷ್ಟು ಕಿಲಾಡಿ ಅಂದರೆ ಪವನ್ ಕುಮಾರ್ ಜೊತೆ ಬೆಂಗಳೂರಿಗೆ ಕಾಲಿಟ್ಟವಳು ತನ್ನ ಹಳೆಯ ಗೆಳೆಯ ದಯಾನಂದ್ ಎಂಬಾತನನ್ನು ಮರೆತಿರಲಿಲ್ಲ. ತುರುವೇಕೆರೆಯಲ್ಲಿ ವಾಸವಿದ್ದ ಸಂದರ್ಭದಲ್ಲಿ ಕರೆನ್ಸಿ ಹಾಕಿಸಿಕೊಳ್ಳಲು ಇದೇ ದಯಾನಂದ್ ಅಂಗಡಿಗೆ ಹೋಗುತ್ತಿದ್ದಳು. ಕರೆನ್ಸಿಗೆಂದು ಹೋದಾಗ ಆಗಿದ್ದ ಪರಿಚಯ ನಂಬರ್ ಬದಲಾಯಿಸಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿತ್ತು.

ಬೆಂಗಳೂರಿಗೆ ಬಂದರೂ ಕರೆನ್ಸಿ ಗೆಳೆಯನ ಜೊತೆ ಸಂಪರ್ಕವಿತ್ತು. ಅದೊಂದು ದಿನ ಬೆಂಗಳೂರಿಗೆ ಬಂದಿದ್ದ ದಯಾನಂದ್ ಅರ್ಪಿತಾ ಗೆ ಕರೆ ಮಾಡಿ ಕ್ಷೇಮ ಸಮಾಚಾರ ವಿಚಾರಿಸಿದ್ದಾನೆ. ಮನೆಗೆ ಬರುತ್ತೇನೆ ಎಂದಿದ್ದಾನೆ. ಈ ವಿಷಯವನ್ನು ಅರ್ಪಿತಾ ಪವನ್ ಗೆ ತಿಳಿಸಿದ್ದಾಳೆ.

ಆಗ್ಲೇ ಹೊಳೆದದ್ದು ಬಾಡಿಗೆ ಕೊಡಲು ಕಾಸು ಮಾಡುವ ಐಡಿಯಾ. ದಯಾನಂದ್ ನನ್ನು ಕರೆಸುವಂತೆ ಸೂಚಿಸಿ, ತಮ್ಮ ಪ್ಲಾನ್ ಅನ್ನು ವಿವರಿಸಿದ್ದಾನೆ.

ಕರೆಗೆ ಕರಗಿ ಬಂದ ದಯಾನಂದ್ ನನ್ನು ರೂಂನಲ್ಲಿ ಕುಳ್ಳಿರಿಸಿದ ಅರ್ಪಿತಾ ಪವನ್ ಗೆ ವಿಷಯ ಮುಟ್ಟಿಸಿದ್ದಾಳೆ. ಕೂಡಲೇ ಮನೆ ಪ್ರವೇಶಿಸಿದ ಪವನ್(25) ತಾನು ಪತ್ರಕರ್ತ ಎಂದರೆ ಜೊತೆಗೆ ಬಂದ ಮತ್ತೊಬ್ಬ ಆಟೋ ಚಾಲಕ ಸಿದ್ಧಾರ್ಥ್(45)  ತಾನು ಪೊಲೀಸ್ ಎಂದಿದ್ದಾನೆ. ಮಾತ್ರವಲ್ಲದೆ ನಿಮ್ಮದು ಅವ್ಯವಹಾರ ಎಂದು ದಯಾನಂದ್ ಕತ್ತಿನಲ್ಲಿದ್ದ ಚಿನ್ನದ ಸರ, ಕೈ ಬೆರಳಿನಲ್ಲಿದ್ದ ಉಂಗುರ ಕಿತ್ತುಕೊಂಡಿದ್ದಾರೆ. ಜೊತೆಗೆ ಎಟಿಎಂ ನಿಂದ 55 ಸಾವಿರ ಹಣ ಡ್ರಾ ಮಾಡಿ ಮನೆಯಿಂದ ಹೊರ ಹಾಕಿದ್ದಾರೆ.

ಈ ಬಗ್ಗೆ ದಯಾನಂದ್ ಸೋಲದೇವನಹಳ್ಳಿಯ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಒಂದಿಷ್ಟು ದಿನ ಕಾರ್ಯಾಚರಣೆ ಬಳಿಕ ಪೊಲೀಸರು ಹನಿಟ್ರ್ಯಾಪ್ ದಂಧೆಯ ಮಂದಿಯನ್ನು ಬಂಧಿಸಿದ್ದಾರೆ.

ಇದೀಗ ಗೊತ್ತಾಗಿರುವ ಪ್ರಕಾರ ಅರ್ಪಿತಾ ಫೇಸ್ ಬುಕ್ ನಲ್ಲಿ ಗೆಳೆಯರನ್ನು ಸಂಪಾದಿಸುತ್ತಿದ್ದಳು. ಬಳಿಕ ಚಕ್ಕಂದದ ಆಸೆ ತೋರಿಸಿ ಅವರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ವಿಡಿಯೋ ರೆಕಾರ್ಡ್ ಆಗುತ್ತಿದ್ದಂತೆ ಮನೆಗೆ ಇದೇ ಪವನ್ ಮತ್ತು ಸಿದ್ದಾರ್ಥ್ ಎಂಟ್ರಿ ಹೊಡೆಯುತ್ತಿದ್ದರು. ವಿಡಿಯೋ ತೋರಿಸಿ ಬೆದರಿಸಿ ಕಾಸು ಪೀಕುತ್ತಿದ್ದರು. ಹೀಗೆ ಏನಿಲ್ಲ ಅಂದರೂ 5 ರಿಂದ 6 ಮಂದಿಗೆ ವಂಚಿಸಿದ್ದಾರೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article