ಬೆಂಗಳೂರು : ಒಂದ್ಸಲ ಗೂಟದ ಕಾರು ಸಿಕ್ರೆ ಸಾಕು, ಗನ್ ಮ್ಯಾನ್, ಝೀರೋ ಟ್ರಾಫಿಕ್ ಹೀಗೆ ಅದ್ಯಾವ ಸೌಲಭ್ಯಗಳಿದೆಯೂ ಎಲ್ಲವನ್ನೂ ನಮ್ಮ ಜನಪ್ರತಿನಿಧಿಗಳು ಪಡೆಯುತ್ತಾರೆ. ಇನ್ನು ಯಾವುದಾದರೂ ಮಂತ್ರಿ ಬೀದಿಗೆ ಇಳಿದ ಅಂದ್ರೆ ಜನ ಸಾಮಾನ್ಯರ ಕಥೆ ಗೋವಿಂದ. ಬಿಸಿಲೋ, ಮಳೆಯೋ ಮಂತ್ರಿಯ ಕಾರು ಹೋಗುವ ತನಕ ಬೀದಿಯಲ್ಲೇ ನಿಲ್ಲಬೇಕು.
ಅದರಲ್ಲೂ ಮುಖ್ಯಮಂತ್ರಿ, ಗೃಹ ಸಚಿವ ಹೀಗೆ ತೂಕದ ಖಾತೆ ಹೊಂದುವವರು ಕಾರು ಹತ್ತಿದ್ರೆ ಅಂಬ್ಯುಲೆನ್ಸ್ ಅನ್ನುವುದನ್ನೂ ಲೆಕ್ಕಿಸದೆ ರಸ್ತೆ ಬ್ಲಾಕ್ ಮಾಡಲಾಗುತ್ತದೆ. ಈ ವಿವಿಐಪಿ ಸಂಸ್ಕೃತಿಯನ್ನು ಸಖತ್ ಎಂಜಾಯ್ ಮಾಡಿದವರು ಅಂದ್ರೆ ಈ ಹಿಂದೆ ಡಿಸಿಎಂ ಆಗಿದ್ದ ಪರಮೇಶ್ವರ್.

ಹಾಗೇ ನೋಡಿದರೆ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಅವರು ಝೀರೋ ಟ್ರಾಫಿಕ್ ಬಯಸುತ್ತಿರಲಿಲ್ಲ. ತನ್ನ ಓಡಾಟದಿಂದ ಜನರಿಗೆ ತೊಂದರೆಯಾಗುವುದು ಬೇಡ ಎಂದು ಪೊಲೀಸರಿಗೆ ಸ್ಪಷ್ಟ ಸೂಚನೆಯನ್ನು ಅವರು ಕೊಟ್ಟಿದ್ದರು. ಯಡಿಯೂರಪ್ಪ ಸಂಪುಟದ ಕೆಲ ಮಂತ್ರಿಗಳು ಝೀರೋ ಟ್ರಾಫಿಕ್ ಪಡೆದು ಸುದ್ದಿಯಾಗಿದ್ದರು. ಅನ್ನು ಕೆಲ ಲೇಟ್ ಲತೀಫ್ ಸಚಿವರು ಮಿನಿಮಮ್ ಟ್ರಾಫಿಕ್ ಸೌಲಭ್ಯ ಪಡೆದಿದ್ದಾರೆ.
ಆದರೆ ಇದೀಗ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅರಗ ಜ್ಞಾನೇಂದ್ರ ನನಗೆ ಝೀರೋ ಟ್ರಾಫಿಕ್ ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಅಷ್ಟೇ ಅಲ್ಲದೆ ನಾನು ಎಲ್ಲರಂತೆ ಸಂಚರಿಸುತ್ತೇನೆ, ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ರಾಮಲಿಂಗಾರೆಡ್ಡಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲೂ ಝೀರೋ ಟ್ರಾಫಿಕ್, ಪೈಲೆಟ್, ಎಸ್ಕಾಟ್ ವ್ಯವಸ್ಥೆ ಬೇಡ ಅನ್ನುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದರು.
Discussion about this post