ಟೋಕಿಯೊ ಒಲಂಪಿಕ್ಸ್ ನಲ್ಲಿ 41 ವರ್ಷಗಳ ನಂತರ, ಭಾರತೀಯ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದೆ. ಹಾಕಿಯಲ್ಲಿ ಭಾರತ 41 ವರ್ಷಗಳ ಬರವನ್ನು ಕೊನೆಗೊಳಿಸಿ ಒಲಿಂಪಿಕ್ಸ್ ಪದಕವನ್ನು ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ 5-4ರಿಂದ ಗೆಲ್ಲುವ ಮೂಲಕ ಕಂಚಿನ ಪದಕ ಗೆದ್ದಿದೆ.
1980ರ ಮಾಸ್ಕೊ ಒಲಿಂಪಿಕ್ಸ್ನಲ್ಲಿ ಭಾರತ ಚಿನ್ನದ ಪದಕ ಜಯಿಸಿತ್ತು. ಈಗ 41 ವರ್ಷಗಳ ಬಳಿಕ ಮತ್ತೆ ಪದಕ ಗೆದ್ದ ಸಾಧನೆ ಮಾಡಿದೆ. ಇನ್ನು ಭಾರತ ಕಂಚು ಗೆದ್ದ ಬೆನ್ನಲ್ಲೇ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.
ಜರ್ಮನಿ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದಿರುವ ಭಾರತ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಕೋವಿಂದ್ ಶುಭ ಹಾರೈಸಿದ್ದಾರೆ.
ಈ ಐತಿಹಾಸಿಕ ವಿಜಯವು ಹಾಕಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತದೆ ಮತ್ತು ಯುವಜನರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಉತ್ಕೃಷ್ಟಗೊಳಿಸಲು ಸ್ಫೂರ್ತಿ ನೀಡುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ನೀವು ಕಷ್ಟಪಟ್ಟು ಕೆಲಸ ಮಾಡಿದ್ದೀರಿ, ಕಷ್ಟಕರವಾದ ಜಾಗತಿಕ ಪರಿಸ್ಥಿತಿಗಳಲ್ಲಿಯೂ ಸಹ ತರಬೇತಿ ಪಡೆದಿದ್ದೀರಿ, ದೇಶವು ನಿಮ್ಮ ಕೌಶಲ್ಯಪೂರ್ಣ ಮತ್ತು ಹೋರಾಟದ ಆಟದ ಬಗ್ಗೆ ಹೆಮ್ಮೆಪಡುತ್ತದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಹೇಳಿದ್ದಾರೆ.
Discussion about this post