ಗುಡ್ಡ ಕುಸಿತಕ್ಕೆ ಸರ್ಜಿಕಲ್ ಸರ್ವೇ ಮೂಲಕ ನಿಖರವಾದ ಕಾರಣ ತಿಳಿಯಲು ಮುಂದಾದ ಸರ್ಕಾರ
ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕಳಸ, ಶೃಂಗೇರಿ ಭಾಗದ ಹಲವೆಡೆ ಇತ್ತೀಚೆಗೆ ಭೂ ಕುಸಿತ ಉಂಟಾದ ಹಿನ್ನೆಲೆ, ನಿಖರ ಕಾರಣ ಅರಿಯಲು, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ, ಸರ್ಜಿಕಲ್ ಸರ್ವೇ ಕಾರ್ಯ ಆರಂಭಿಸಿದೆ.
ಮುಳ್ಳಯ್ಯನಗಿರಿ ಭಾಗದಲ್ಲಿ ಸಮೀಕ್ಷಾ ಕಾರ್ಯ ಆರಂಭಿಸಿರುವ ತಂಡ, ಜಿಲ್ಲಾಡಳಿತ ಗುರುತಿಸಿರುವ, ಸುಮಾರು ೮೮ ಅಪಾಯಕಾರಿ ಸ್ಥಳಗಳಲ್ಲಿ ಸಮೀಕ್ಷೆ ಕೈಗೊಂಡು, ರಾಜ್ಯ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲಿದೆ.
ಜಿಯೋಲಾಜಿಕಲ್ ಸರ್ವೆ ತಂಡ ಪರಿಶೀಲನೆ ಮೂಲಕ ಮಲೆನಾಡು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆಯಿಂದ ಸಂಭವಿಸುತ್ತಿರುವ ಸಾಲು ಸಾಲು ಅನಾಹುತ, ಭೂ ಕುಸಿತ, ಗುಡ್ಡ ಕುಸಿತಕ್ಕೆ ನಿಖರವಾದ ಕಾರಣ ತಿಳಿಯಲು ಸರ್ಕಾರ ಮುಂದಾಗಿದೆ.
ಮಲೆನಾಡು, ದಟ್ಟ ಕಾಡು ಪಶ್ಚಿಮ ಘಟ್ಟ ಸಾಲಿನ ಸೋಲಾ ಅರಣ್ಯ ಹೊಂದಿರುವ ಪ್ರಕೃತಿ ಸೌಂದರ್ಯದಿಂದ ತುಂಬಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಾರು ಪ್ರವಾಸಿತಾಣಗಳಿವೆ. ಹೀಗಾಗಿ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ರಾಜ್ಯದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಹೀಗೆ ಅನೇಕ ಪ್ರವಾಸಿ ತಾಣಗಳಿಂದ ತುಂಬಿರುವ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತ ಸೇರಿದಂತೆ ಚಿಕ್ಕಮಗಳೂರು, ಶೃಂಗೇರಿ, ಕಳಸ, ಮೂಡಿಗೆರೆ, ಕೊಪ್ಪ ತಾಲೂಕಿನ 88 ಪ್ರದೇಶಗಳು ಡೇಂಜರಸ್ ಪಟ್ಟಿಗೆ ಸೇರಿದೆ ಎಂದು ಹೇಳಲಾಗಿದೆ.