ಮಂಗಳೂರು : ರಾಜ್ಯದ 26 ಜಿಲ್ಲೆಗಳಲ್ಲಿ ಇಂದು 9 ರಿಂದ 12ನೇ ತರಗತಿಗಳು ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ. ಈ ನಡುವೆ ರಾಜ್ಯದ 5 ಜಿಲ್ಲೆಗಳಲ್ಲಿ ಶಾಲೆಗಳನ್ನು ಪ್ರಾರಂಭಿಸದೇ ಇರಲು ನಿರ್ಧರಿಸಲಾಗಿದೆ.
ಈಗಾಗಲೇ ಪಾಸಿಟಿವಿಟಿ ದರ ಶೇ2ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಮಾತ್ರ ಶಾಲೆಗಳನ್ನು ತೆರೆಯಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನದಲ್ಲಿ ಪಾಸಿಟಿವಿಟಿ ದರ ಶೇ 2ಕ್ಕಿಂತ ಹೆಚ್ಚಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಹೇಳುವುದೇ ಬೇಡ. ಮುಖ್ಯಮಂತ್ರಿಗಳು ಬಂದು ಸಭೆ ಮಾಡಿ ಹೋದ ಮೇಲೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕೊರೋನಾ ನಿಯಂತ್ರಿಸಲು ಸಾಧ್ಯವಾಗಿಲ್ಲ. ಬೆಂಗಳೂರಿಗಿಂತ ಹೆಚ್ಚು ಪ್ರಕರಣ ಇಲ್ಲಿ ವರದಿಯಾಗುತ್ತಿದೆ ಪರಿಸ್ಥಿತಿ ಹೇಗಿರಬಹುದು.
ಇನ್ನು ಶಾಲೆಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ತರಗತಿಗಳನ್ನು ನಡೆಸಲು ಆದೇಶಿಸಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು 15 ರಿಂದ 20 ವಿದ್ಯಾರ್ಥಿಗಳ ತಂಡ ರಚಿಸಿ 9 ಹಾಗೂ 10ನೇ ತರಗತಿಯ ಪಾಠ ಮಾಡಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದ್ದು, ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 10 ರಿಂದ 1.30ರತನಕ ಮಾತ್ರ ತರಗತಿಗಳು ನಡೆಯಲಿದ್ದು, ತಲಾ 40 ನಿಮಿಷದ 5 ಪೀರಿಯೆಡ್ ಮತ್ತು ಶನಿವಾರ 4 ಪೀರಿಯೆಡ್ ಪಾಠ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
ಇನ್ನು ಪಿಯು ಕಾಲೇಜುಗಳಲ್ಲಿ ಪಾಳಿ ವ್ಯವಸ್ಥೆಯಲ್ಲಿ ತರಗತಿಗಳು ನಡೆಯಲಿದ್ದು, ವಾರದ ಮೊದಲ 3 ದಿನ ಶೇ50 ವಿದ್ಯಾರ್ಥಿಗಳಿಗೆ ಹಾಗೂ ನಂತರದ 3 ದಿನದ ಉಳಿದ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ನಡೆಯಲಿದೆ. ಭೌತಿಕ ತರಗತಿ ಇಲ್ಲದ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ತರಗತಿಗಳಿಗೆ ಹಾಜರಾಗಬೇಕಾಗಿದೆ.
Discussion about this post