ಆರು ವರ್ಷಗಳ ಹಿಂದೆ ಅಂದ್ರೆ 2013 ಎಪ್ರಿಲ್ 9 ರಂದು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಉಂಟಾದ ಅನಿಲ ಸೋರಿಕೆ ಜೊತೆಗೆ ಸ್ಪೋಟದ ಪರಿಣಾಮ ಇಡೀ ಊರಿಗೇ ಬೆಂಕಿ ಬಿದ್ದಿತ್ತು. ಆ ಕರಾಳ ಮಂಗಳವಾರ ದುರಂತದಲ್ಲಿ ಹನ್ನೊಂದು ಮಂದಿ ಸಾವನ್ನಪ್ಪಿದ್ದರು.
ಇದಾದ ನಂತರ ಹಲವು ಬಾರಿ ಗ್ಯಾಸ್ ಟ್ಯಾಂಕರ್ ಗಳ ಸೋರಿಕೆ ನಡೆದಿತ್ತು. ಆದರೆ 2013ರ ಘಟನೆಯಿಂದ ಊರು ಇನ್ನೂ ಚೇತರಿಸಿಕೊಂಡಿಲ್ಲ.
ಈ ನಡುವೆ ಇಂದು ಸೋಮವಾರ ( ನವೆಂಬರ್ 4 2019) ಮಂಗಳೂರಿನಿಂದ ಹಾಸನ ಕಡೆ ಹೋಗುತ್ತಿದ್ದ ಟೋಟಲ್ ಗ್ಯಾಸ್ ಕಂಪನಿಯ ಅನಿಲ ಟ್ಯಾಂಕರ್‌ನ ಮೇಲ್ಭಾಗದ ವಾಲ್ವ್ ಕರ್ವೇಲ್ ಬಳಿ ಬೆಳಗ್ಗೆ 8ರ ಸುಮಾರಿಗೆ ಏಕಾಏಕಿ ತೆರೆದುಕೊಂಡಿತ್ತು. ಈ ಸಂದರ್ಭ ರಭಸದಿಂದ ನೀರು ಚಿಮ್ಮುವ ಶೈಲಿಯಲ್ಲಿ ಗ್ಯಾಸ್ ಮೇಲ್ಭಾಗಕ್ಕೆ ಚಿಮ್ಮಿ, ಗಾಳಿಯೊಂದಿಗೆ ಬೆರೆತು ಆವಿಯಾಗತೊಡಗಿತ್ತು.
ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು ಸಮೀಪದ ಕರ್ವೇಲ್ ಮಸೀದಿಗೆ ಧಾವಿಸಿದ್ದಾರೆ. ಮೈಕ್ ಮೂಲಕ ಅನೌನ್ಸ್ ಮಾಡಿ ಪರಿಸರದಲ್ಲಿ ಬೆಂಕಿ ಉರಿಸದಂತೆ ಮನವಿ ಮಾಡಿದ್ದಾರೆ. ಜೊತೆಗೆ ಸಮೀಪದ ಮನೆಯವರನ್ನು ಕೂಡಾ ಸ್ಥಳಾಂತರಿಸಿ ದೊಡ್ಡದೊಂದು ಅಪಾಯ ತಪ್ಪಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಸಹಾಯದಿಂದ ಇಕ್ಕೆಲಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಈ ಮೂಲಕ ನಡೆಯಲಿದ್ದ ಭಾರಿ ಅನಾಹುತವನ್ನು ತಪ್ಪಿಸಲಾಯಿತು.
ನಂತರ ತುರ್ತು ಅನಿಲ ಸೋರಿಕೆ ಕಾರ್ಯಾಚರಣೆ ದಳದವರು ಆಗಮಿಸಿ ಒಂದೂವರೆ ಗಂಟೆಗಳ ಶ್ರಮದ ಬಳಿಕ ಗ್ಯಾಸ್ ಸೋರಿಕೆಯನ್ನು ನಿಲ್ಲಿಸಲಾಯ್ತು.
ಈ ನಡುವೆ ಸ್ಥಳೀಯರ ಆಕ್ರೋಶಕ್ಕೆ ತುತ್ತಾಗಿದ್ದು ಅಗ್ನಿ ಶಾಮಕದಳ. ಘಟನೆ ನಡೆದ ಕೂಡಲೇ ಪುತ್ತೂರು ಅಗ್ನಿಶಾಮಕ ದಳಕ್ಕೆ ಸ್ಥಳೀಯರು ಮಾಹಿತಿ ನೀಡಿದ್ದು, ಆದರೆ ಅವರು ಇಲ್ಲಿಗೆ ತಲುವಷ್ಟರಲ್ಲಿ ಅನಿಲ ಸೋರಿಕೆ ತಡೆಗಟ್ಟುವ ಕಾರ್ಯಾಚರಣೆ ಮುಕ್ತಾಯಗೊಂಡಿತ್ತು. ಪುತ್ತೂರಿನಿಂದ ಇಲ್ಲಿಗೆ ಸುಮಾರು 12 ಕಿ.ಮೀ. ಅಂತರವಿದ್ದು ಆದರೂ ಅಗ್ನಿಶಾಮಕ ದಳ ಇಲ್ಲಿಗೆ ಆಗಮಿಸುವಾಗ ಒಂದೂವರೆ ಗಂಟೆ ಕಳೆದಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಗ್ನಿ ಶಾಮಕದಳ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತಂತೆ ತನಿಖೆಯೊಂದರ ಅವಶ್ಯಕತೆ ಖಂಡಿತಾ ಇದೆ. ಅವರು ನಿಜಕ್ಕೂ ವಿಳಂಭ ಮಾಡಿದರೆ ಅನ್ನುವುದು ಗೊತ್ತಾಗಬೇಕಾಗಿದೆ. ಒಂದು ವೇಳೆ ತಡವಾಗಿದೆ ಅನ್ನುವುದಾಗಿದ್ದರೆ ಯಾಕೆ ಅನ್ನುವುದನ್ನು ಬಹಿರಂಗಪಡಿಸಬೇಕು.
ತಾಂತ್ರಿಕ ಕಾರಣದಿಂದ ವಿಳಂಭವಾಗಿದ್ದರೆ ಸಹಿಸಿಕೊಳ್ಳಬಹುದು.ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಳಂಭವಾಗಿದ್ದರೆ ಅವರನ್ನು ಮನೆಗೆ ಕಳುಹಿಸುವುದೇ ಉತ್ತಮ. ಅಗ್ನಿ ಶಾಮಕ ದಳದ ವಿಳಂಭದಿಂದ ಹೆಚ್ಚು ಕಡಿಮೆಯಾಗಿರುತ್ತಿದ್ದರೆ ಮತ್ತೊಂದು ಪೆರ್ನೆ ಘಟನೆಗೆ ಉಪ್ಪಿನಂಗಡಿ ಸಾಕ್ಷಿಯಾಗಬೇಕಾಗಿತ್ತು.
ಇನ್ನು ಟ್ಯಾಂಕರ್ ವಾಲ್ವ್ ಸಿಡಿಯೋದಕ್ಕೆ ಹೇಗೆ ಸಾಧ್ಯ. ದಾರಿ ಮಧ್ಯೆ ಹೇಗೆ ಎಡವಟ್ಟಾಗುತ್ತದೆ ಅಂದ್ರೆ ಇದು ಜನರ ಜೀವದೊಂದಿಗೆ ಟೋಟಲ್ ಗ್ಯಾಸ್ ಕಂಪನಿ ಚೆಲ್ಲಾಟವಾಡಿದಂತೆ. ವಾಲ್ವ್ ಸಿಡಿತದ ಹಿಂದೆ ಟೋಟಲ್ ಗ್ಯಾಸ್ ಕಂಪನಿಯ ನಿರ್ಲಕ್ಷ್ಯದ ವಾಸನೆಯೂ ಕಾಣುತ್ತಿದೆ.
Discussion about this post