ಮಳೆ ಮುಂದುವರಿದರೆ ಈರುಳ್ಳಿ ದರ ಮತ್ತಷ್ಟು ಏರೋದು ಪಕ್ಕಾ
ಮಳೆ ಬಂದರೂ ಕಷ್ಟ ಬಾರದಿದ್ದರೂ ಕಷ್ಟ ಅನ್ನೋದು ರೈತರ ಪರಿಸ್ಥಿತಿ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಸುರಿಯದಿದ್ರೆ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ. ಈ ಈರುಳ್ಳಿ ಬೆಳೆಗಾರರ ಪರಿಸ್ಥಿತಿಯೂ ಅದೇ ಆಗಿದೆ, ಬಿತ್ತನ ಹೊತ್ತಿನಲ್ಲಿ ಕೈ ಕೊಡುವ ಮಳೆ ಕಟಾವಿ ಹೊತ್ತಿನಲ್ಲಿ ಸುರಿಯಲಾರಂಭಿಸುತ್ತದೆ. ಇದೇ ಕಾರಣದಿಂದ ಈ ಬಾರಿ ಈರುಳ್ಳಿ ಬೆಳೆಗಾರರಲ್ಲಿ ಆತಂಕ ಮಡುಗಟ್ಟಿದೆ.
ಕೇವಲ ಬೆಳೆಗಾರರು ಮಾತ್ರವಲ್ಲ, ಇದರ ಬಿಸಿ ಗ್ರಾಹಕರಿಗೂ ತಟ್ಟಲಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾದ ಕಾರಣ ಈರುಳ್ಳಿಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಹೀಗಾಗಿ ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಬೆಳೆ ಕುಂಠಿತವಾಗೋ ಸಾಧ್ಯತೆ ಇದೆ. ಇದರಿಂದ ಮುಂದಿನ ದಿನಗಳಲ್ಲಿ ಈರುಳ್ಳಿ ದರ ಏರೋದು ಪಕ್ಕಾ ಅನ್ನಲಾಗಿದೆ. ಉತ್ತರ ಕರ್ನಾಟಕದ ಈರುಳ್ಳಿ ಕೊಯ್ಲಿಗೆ ಇನ್ನೂ ಒಂದು ತಿಂಗಳಿದ್ದು, ಮಳೆಯ ಪ್ರಮಾಣ ಕಡಿಮೆಯಾಗದಿದ್ರೆ ಬೆಳೆ ಕೈಕೊಡುವುದು ಪಕ್ಕಾ ಅನ್ನಲಾಗಿದೆ.
ಈ ನಡುವೆ ಯಶವಂತಪುರ ಮತ್ತು ದಾಸನಪುರ ಎಪಿಎಂಸಿಗೆ ಮಹಾರಾಷ್ಟ್ರದ ಪೂನಾದಿಂದ ಈರುಳ್ಳಿ ಬಂದಿದ್ದು ಸಗಟು ದರ ಕಿಂಟ್ವಾಲ್ ಗೆ 2 ಸಾವಿರದಿಂದ 4500ಕ್ಕೆ ಮಾರಾಟವಾಗಿದೆ. ಹೀಗಾಗಿ ಚಿಲ್ಲರೆ ಮಾರುಕಟ್ಟೆ ದರ 55 ರಿಂದ 60 ರೂಪಾಯಿಯಷ್ಟಿತ್ತು. ಇದರೊಂದಿಗೆ ಚಿತ್ರದುರ್ಗ, ಚಳ್ಳಕೆರೆ ಭಾಗದಿಂದ ಹತ್ತಿಪತ್ತು ಲಾರಿಗಳಲ್ಲಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ.
ಆದರೆ ಬೇಡಿಕೆಗೆ ಬೇಕಾದಷ್ಟು ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದೆ ಅನ್ನಲಾಗಿದೆ.
ಈ ನಡುವೆ ಬೆಳ್ಳುಳಿ ದರವೂ ಮತ್ತೆ ಗಗನ ಮುಖಿಯಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಕೆಜಿಗೆ 400 ರೂಪಾಯಿಯಂತೆ ಮಾರಾಟವಾಗುತ್ತಿರುವ ಬೆಳ್ಳುಳ್ಳಿ ಮತ್ತಷ್ಟು ಏರಿಕೆಯಾಗೋ ಸಾಧ್ಯತೆಗಳಿದೆಯಂತೆ. ಈ ಹಿಂದೆ ಅಂದ್ರೆ ಈ ವರ್ಷದ ಜನವರಿ ತಿಂಗಳಲ್ಲಿ ಬೆಳ್ಳುಳ್ಳಿ ದರ 500 ರೂಪಾಯಿಯ ಗಡಿ ತಲುಪಿತ್ತು, ಬಳಿಕ 250 ರೂಪಾಯಿ ತನಕ ಇಳಿಕೆ ಕಂಡಿತ್ತು.