ಚಿಕ್ಕಮಗಳೂರು : ನಾಲ್ಕೈದು ದಿನಗಳ ಹಿಂದೆ ಚಿಕ್ಕಮಗಳೂರಿನ ಕೊಟ್ಟಿಗೆಹಾರದ ಜನರ ನಿದ್ದೆಗೆಡಿಸಿದ್ದ ಮಂಗ ಮತ್ತೆ ಪ್ರತ್ಯಕ್ಷವಾಗಿದೆ. ಮಂಗಳವಾರ ರಾತ್ರಿ 22 ಕಿಮೀ ದೂರದಿಂದ ಲಾರಿಯೊಂದರಲ್ಲಿ ಬಂದಿರುವ ಮಂಗ ಜನರಲ್ಲಿ ಮತ್ತೆ ಭೀತಿ ಮೂಡಿಸಿದೆ. ಮಂಗನ ರೀ ಎಂಟ್ರಿಯಿಂದ ಕೊಟ್ಟಿಗೆಹಾರ ಪ್ರದೇಶದಲ್ಲಿ ಆತಂಕ ಮರುಕಳಿಸಿದೆ. ಹೀಗಾಗಿ ಮಂಗನ ಕೋಪಕ್ಕೆ ತುತ್ತಾಗಿದ್ದ ಆಟೋಚಾಲಕನ ಕಥೆಯೇನು ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಸಪ್ಟಂಬರ್16ರಂದು ಮೊರಾರ್ಜಿ ಶಾಲೆಯಲ್ಲಿ ಮಂಗನೊಂದಿಗೆ ಆಟೋ ಚಾಲಕನೊಬ್ಬ ಕಿರಿಕ್ ಮಾಡಿಕೊಂಡಿದ್ದ, ಹೀಗಾಗಿ ರೊಚ್ಚಿಗೆದ್ದ ಅದು ಆಟೋ ಚಾಲಕನನ್ನು ಬೆನ್ನಟ್ಟಿತ್ತು. ಕೋತಿಯ ಸಿಟ್ಟಿಗೆ ಬೆದರಿದ ಆಟೋ ಚಾಲಕ ಬೇರೆ ಬೇರೆ ಆಟೋ, ಕಾರಿನಲ್ಲಿ ಕದ್ದು ಕೂತಿದ್ದ. ಹಾಗಿದ್ದ ಮೇಲೂ ಆಟೋ ಚಾಲಕನನ್ನ ಎರಡು ಕಿ.ಮೀ. ಬೆನ್ನಟ್ಟಿದ್ದ ಕೋತಿ ಸಪ್ಟಂಬರ್ 17 ರಂದು ಸಂಜೆಯಾಗುತ್ತಿದ್ದಂತೆ ದಾರಿಹೋಕರ ಮೇಲೂ ದಾಳಿಗೆ ಮುಂದಾಗಿತ್ತು. ಮಾತ್ರವಲ್ಲದೆ ತನ್ನ ಕೋಪವನ್ನು ಆಟೋ ಚಾಲಕನ ಆಟೋ ಮೇಲೆ ತೀರಿಸಿಕೊಂಡಿತ್ತು.

ಬಳಿಕ 50 ಜನರು ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಾಯದೊಂದಿಗೆ ಸತತ 20 ಗಂಟೆಗಳ ಕಾರ್ಯಾಚರಣೆ ನಡೆಸಿ, ಕೊನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಮಂಗನನ್ನು ಸೆರೆ ಹಿಡಿದಿದ್ದರು. ಬಳಿಕ ಅದನ್ನು 22 ಕಿ.ಮೀ. ದೂರ ತೆರಳಿ ಚಾರ್ಮಾಡಿ ಘಾಟ್ನಲ್ಲಿ ಬಿಟ್ಟು ಬರಲಾಗಿತ್ತು. ಇದೀಗ ಅದೇ ಮಂಗ ಇಂದು ಲಾರಿಯೊಂದನ್ನು ಏರಿ ಹಳೆಯ ಪ್ರದೇಶಕ್ಕೆ ಬಂದಿದೆ. ಇನ್ನು ಆ ಆಟೋಚಾಲಕನಿಗೇನು ಗ್ರಹಚಾರ ಕಾದಿದೆಯೋ.

Discussion about this post