ನವದೆಹಲಿ : ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರ ಹಿಡಿಯಬೇಕು ಅನ್ನುವುದು ಕಾಂಗ್ರೆಸ್ ನಿರ್ಧಾರ. ಈಗಿನ ಸ್ಥಿತಿಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಬಹುಮತ ಪಡೆಯುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ದೋಸ್ತಿಗಳ ಸಹಕಾರ ಅನಿವಾರ್ಯ, ಆದರೆ ದೋಸ್ತಿಗಳ ನಡುವಿನ ಕಚ್ಚಾಟವೇ ದೊಡ್ಡ ಸಮಸ್ಯೆಯಾಗಿದೆ.
ಈ ನಡುವೆ ಕಾಂಗ್ರೆಸ್ ನಾಯಕರ ಎಡವಟ್ಟು ನಿರ್ಧಾರಗಳು ಬಿಜೆಪಿಗೆ ವರವಾಗಿ ಪರಿಣಮಿಸುತ್ತಿದೆ. ವಿವಿಧ ರಾಜ್ಯಗಳಲ್ಲಿ ಎದ್ದಿರುವ ಬಂಡಾಯವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ. ಈ ನಡುವೆ ಸಾಫ್ಟ್ ಹಿಂದುತ್ವ ಕಡೆ ಹೆಜ್ಜೆ ಹಾಕುತ್ತಿರುವ ಕಾಂಗ್ರೆಸ್, ಕನ್ನಯ್ಯ ಹಾಗೂ ಮೇವಾನಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಹಿಂದೂ ಮತಗಳಿಗೆ ಕಲ್ಲು ಹಾಕಿದೆ.
ಈ ಎಲ್ಲದರ ನಡುವೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಒಂದು ಕಾಲದ ಕೇಸರಿ ವಿರೋಧಿ ಕ್ಯಾಪ್ಟನ್ ಕೇಸರಿ ಪಕ್ಷ ಸೇರುತ್ತಾರೆ ಅನ್ನುವ ಸುದ್ದಿಗಳಿಗೆ ಪುಷ್ಟಿ ಸಿಕ್ಕಿದೆ.
ಉಭಯ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ. ಇದೊಂದು ಸೌಜನ್ಯದ ಭೇಟಿ ಅನ್ನುವುದು ಕ್ಯಾಪ್ಟನ್ ತಂಡದ ಹೇಳಿಕೆ. ಆದರೆ ಮಾಹಿತಿ ಪ್ರಕಾರ ಅಮರೀಂದರ್ ಸಿಂಗ್ ಶೀಘ್ರದಲ್ಲೇ ಬಿಜೆಪಿ ಸೇರಲಿದ್ದು ಮೋದಿ ಸಂಪುಟದಲ್ಲಿ ಕೃಷಿ ಸಚಿವರಾಗಲಿದ್ದಾರಂತೆ. ಈ ಮೂಲಕ ರೈತ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ಮಣಿಸಲು ಹೊಸ ಆಸ್ತ್ರ ಪ್ರಯೋಗಿಸಲು ಮೋದಿ ರೆಡಿಯಾಗುತ್ತಿದ್ದಾರಂತೆ.
Discussion about this post