ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ ಫ್ಲೆಕ್ಸ್ ಹಾವಳಿ ವಿರುದ್ಧ ಗುಡುಗಿದ್ದ ಹೈಕೋರ್ಟ್, ಬಿಬಿಎಂಪಿಯನ್ನು ಹಿಗ್ಗಾ ಮುಗ್ಗಾ ಜಾಡಿಸಿತ್ತು. ಆದರೆ ದಪ್ಪ ಚರ್ಮದ ಬಿಬಿಎಂಪಿಗೆ ಅದೆಷ್ಟರ ಮಟ್ಟಿಗೆ ತಟ್ಟಿದೆ ಅನ್ನುವುದು ಅರಿವಾಗಲು ಇನ್ನೊಂದಿಷ್ಟು ದಿನ ಬೇಕು. ಹೈಕೋರ್ಟ್ ಚಾಟಿ ಎಂದು ಮಾಧ್ಯಮಗಳಲ್ಲಿ ವರದಿಯಾದ ಕಾರಣ ಬಿಬಿಎಂಪಿ ಅಕ್ರಮವಾಗಿ ಹಾಕಿದ ಜಾಹೀರಾತನ್ನು ತೆರವು ಮಾಡುತ್ತಿದೆ.
ಈ ನಡುವೆ ತೆರವು ಕಾರ್ಯಾಚರಣೆ ವೇಳೆ ಬಿಬಿಎಂಪಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಗರ ಪೊಲೀಸ್ ಆಯುಕ್ತರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಅವರನ್ನು ಕೋರ್ಟ್ ಗೆ ಕರೆಯಿಸಿಕೊಂಡ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿಯವರು, ಆಯುಕ್ತರಿಗೆ ಪ್ರಶ್ನೆಗಳ ಸರಮಾಲೆ ಎಸೆದರು.
ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದೀರಾ..?
ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟು ಆರೋಪಿಗಳನ್ನು ಬಂಧಿಸಿದ್ದೀರಿ?
ಆರೋಪಿಗಳೇನಾದರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆಯೇ?
ಎಂದು ಪ್ರಶ್ನಿಸಿದ ಮಾಹೇಶ್ವರಿ, ಹಲ್ಲೆ ನಡೆಸಿದವರ ವಿರುದ್ಧ ಸಮಾಜದಲ್ಲಿ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲಿಸುವಂತೆ ಪೊಲೀಸ್ ಆಯುಕ್ತರಿಗೆ ಕಟ್ಟಪ್ಪಣೆ ವಿಧಿಸಿದರು.
ಅಧಿಕಾರಿಗಳ ಮೈ ಮುಟ್ಟಿದರೆ ಅವರಿಗೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಕೋರ್ಟ್, ಹಲ್ಲೆ ನಡೆಸಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಿ ಎಂದು ಆಯುಕ್ತರಿಗೆ ಸೂಚಿಸಿದೆ.
ಘಟನೆ ವಿವರ..
ಹೈಕೋರ್ಟ್ ಆದೇಶದಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಆಯುಕ್ತರು, ಎಲ್ಲ ಸಿಬ್ಬಂದಿಗೆ ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ತೆರವು ಮಾಡುವಂತೆ ಆದೇಶ ನೀಡಿದ್ದರು. ಹೀಗಾಗಿ ಗುರುವಾರವೂ ಬಿಬಿಎಂಪಿ ಸಿಬ್ಬಂದಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಕಾರ್ಯ ಮುಂದುವರಿಸಿದ್ದರು. ಟಿನ್ ಫ್ಯಾಕ್ಟರಿ ಬಳಿ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳನ್ನು ತೆಗೆಯುತ್ತಿದ್ದಾಗ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಹೆಚ್.ಎ.ಎಲ್ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಅವರ ಮೇಲೆ ಹಲ್ಲೆ ಮಾಡಿ, ಆರೋಪಿಗಳು ಪರಾರಿಯಾಗಿದ್ದರು.
ಈ ಮಧ್ಯೆ, ಮಹದೇವಪುರ ವಲಯದ ಟಿನ್ ಫ್ಯಾಕ್ಟರಿ ಬಳಿ ಫ್ಲೆಕ್ಸ್ ಹಾಗೂ ಬ್ಯಾನರ್ ತೆರವು ಮಾಡುತ್ತಿದ್ದ ಬಿಬಿಎಂಪಿ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದ ನಾಲ್ವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದು, ಟಿನ್ ಫ್ಯಾಕ್ಟರಿ ಸಮೀಪದ ಉದಯನಗರ ನಿವಾಸಿಗಳಾದ ರಾಜೇಂದ್ರ, ಸಿಮ್ಸನ್, ಕಮಲನಾಥ್, ಸೂರ್ಯ ಬಂಧಿತ ಆರೋಪಿಗಳು ಎನ್ನಲಾಗಿದೆ.
ಇಡೀ ಪ್ರಕರಣ ನೋಡಿದರೆ ಕುಮಾರಸ್ವಾಮಿ ಸರ್ಕಾರದ ಲೋಪ ಎದ್ದು ಕಾಣುತ್ತಿದೆ. ಅಕ್ರಮ ಫ್ಲೆಕ್ಸ್ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ ಹೈಕೋರ್ಟ್ ಮಧ್ಯ ಪ್ರವೇಶ ಅಗತ್ಯವೇ ಇರಲಿಲ್ಲ. ಕೋರ್ಟ್ ಗೆ ಮಾಡಲು ಸಾಕಷ್ಟು ಕೆಲಸವಿದೆ ಅನ್ನುವ ಅರಿವು, ಕಾಳಜಿ ರಾಜ್ಯ ಸರ್ಕಾರಕ್ಕೆ ಇರುತ್ತಿದ್ದರೆ ಪ್ರಕರಣ ಕೋರ್ಟ್ ಮೆಟ್ಟಿಲು ಏರುತ್ತಿರಲಿಲ್ಲ.
ಇದನ್ನೂ ನೋಡಿ : ಮೋದಿಯವರೇ ನೀವು ಹೀಗೆ ಮಾಡಬಾರದಿತ್ತು
ಅಕ್ರಮ ಜಾಹೀರಾತು ತೆರವುಗೊಳಿಸಿ ಎಂದು ಬೆಂಗಳೂರು ಉಸ್ತುವಾರಿ ಸಚಿವ ಪರಮೇಶ್ವರ್ ಸೂಚಿಸಿದ್ದರೆ ಸಾಕಿತ್ತು. ಪಾಪ ಅವರು ಹೇಗೆ ತಾನೇ ಹೇಳಲು ಸಾಧ್ಯ , ಪ್ಲೆಕ್ಸ್ ಬ್ಯಾನರ್ ಹಾಕುವ ಮಂದಿ ರಾಜಕೀಯ ನಾಯಕರ ಚೇಲಾಗಳು ತಾನೇ.
ಒಟ್ಟಿನಲ್ಲಿ ರಾಜ್ಯ ಸರ್ಕಾರದ ವೈಫಲ್ಯ ರಾಜ್ಯದ ಮಾನವನ್ನು ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಮಾಡಿದೆ.