ಬೆಂಗಳೂರು : ಮಾಸ್ತಿ ಗುಡಿ ಸಿನಿಮಾ ದುರ್ಘಟನೆಯ ಬಳಿಕ ಮತ್ತೊಂದು ಕನ್ನಡ ಚಿತ್ರ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿದೆ. ಈ ದಘಟನೆಯಲ್ಲಿ ಫೈಟರ್ ಒಬ್ಬರು ಮೃತಪಟ್ಟಿದ್ದಾರೆ.
ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ರಾಮನಗರ ಜಿಲ್ಲೆಯ ಜೋಗನದೊಡ್ಡಿಯಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ (28) ಮೃತಪಟ್ಟಿದ್ದಾರೆ.
ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿಯನದ ಚಿತ್ರ ಇದಾಗಿದ್ದು ರೋಪ್ ಎಳೆಯುವಾಗ ಫೈಟರ್ ವಿವೇಕ್ ಅವರಿಗೆ ವಿದ್ಯುತ್ ತಂತಿ ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು, ಆದ್ರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಇನ್ನು ಘಟನೆ ಕುರಿತಂತೆ ಖಾಸಗಿ ವಾಹಿನಿಗಳೊಂದಿಗೆ ಮಾತನಾಡಿರುವ ಅಜಯ್ ರಾವ್, ವಿವೇಕ್ ಗೆ ನ್ಯಾಯ ಸಿಗುವ ತನಕ ನಾನು ಶೂಟಿಂಗ್ಗೆ ಹೋಗಲ್ಲ ಅಂದಿದ್ದಾರೆ
ನಾನು ಯಾವಾಗಲೂ ಮುಂಜಾಗ್ರತೆಗೆ ಜಾಸ್ತಿ ಮಹತ್ವ ನೀಡುತ್ತೇನೆ. ನಾವು ಏನಾದರೂ ಹೇಳಲು ಹೋದರೆ, ಮೂಗು ತೂರಿಸುತ್ತಾರೆ ಅಂತ ಹೇಳುತ್ತಾರೆ. ಈಚೆಗಷ್ಟೇ ಮೆಟಲ್ ರೋಪ್ ಬಳಸುವ ಬಗ್ಗೆ ಪ್ರಶ್ನಿಸಿ ಕೆಟ್ಟವನಾಗಿದ್ದೇನೆ. ಚಿತ್ರದ ಬಗ್ಗೆ ಜಾಸ್ತಿ ಕೇಳಿದರೆ ನಾವು ಕೆಟ್ಟವರಾಗಿಬಿಡುತ್ತೇವೆ.
ಮೆಟಲ್ ರೋಪ್ ಬಳಸಿದ್ದರಿಂದ ದುರಂತ ಸಂಭವಿಸಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಾನು ಇರಲಿಲ್ಲ. ಅಲ್ಲಿ ಇರುತ್ತಿದ್ರೆ ಮುಂಜಾಗ್ರತೆ ಬಗ್ಗೆ ಮೊದಲೇ ಹೇಳುತ್ತಿದ್ದೆ. ಈ ಸಾಹಸ ದೃಶ್ಯಗಳ ಚಿತ್ರೀಕರಣ ಐದು ದಿನಗಳಿಂದ ನಡೆಯುತ್ತಿತ್ತು. ಇಂದು ಕೊನೆಯ ದಿನದ ಚಿತ್ರೀಕರಣ ನಡೆಯುತ್ತಿತ್ತು. ಆದರೆ, ಸುಮಾರು 12 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ಹಾದು ಹೋಗಿರುವುದನ್ನು ಗಮನಿಸದೆಯೇ ಫೈಟರ್ಗೆ ರೋಪ್ ಕಟ್ಟಿ, ಅತನನ್ನು ಕ್ರೇನ್ ಮೂಲಕ ಮೇಲಕ್ಕೆ ಎತ್ತಲಾಗಿತ್ತು. ಈ ವೇಳೆ ವಿದ್ಯುತ್ ಸ್ಪರ್ಶಿಸಿ ವಿವೇಕ್ ಸಾವನ್ನಪ್ಪಿದ್ದಾರೆ ಎಂದು ಅಜಯ್ ವಿವರಿಸಿದ್ದಾರೆ.
Discussion about this post