ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಘೋಷಿಸುವ ಸಂದರ್ಭದಲ್ಲಿ ವಿದಾಯ ಭಾಷಣ ಮಾಡಿದ ರಮೇಶ್ ಕುಮಾರ್, ಭಾರತದ ಚುನಾವಣಾ ವ್ಯವಸ್ಥೆಯ ಸುಧಾರಣೆ ಬಗ್ಗೆಯೂ ಮಾತನಾಡಿದ್ದಾರೆ.
“ ಈ ದೇಶದ ಸಾರ್ವಜನಿಕ ಜೀವನದ ಭ್ರಷ್ಟಾಚಾರದ ಮೂಲ ಚುನಾವಣೆಗಳ ವ್ಯವಸ್ಥೆ. ಚುನಾವಣೆಗಳು ಸುಧಾರಣೆಯಾಗದ ಹೊರತು ನಾವು ಭ್ರಷ್ಟಚಾರದ ಬಗ್ಗೆ ಮಾತನಾಡಿದ್ರೆ ಅದು ಕಾಟಾಚಾರದ, ಜಾಣತನದ ಮಾತಾಗುತ್ತದೆ. ಹೊರತು ಬದ್ಧತೆಯ ಮಾತಾಗುವುದಿಲ್ಲ” ಎಂದು ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಚುನಾವಣೆಯ ಸುಧಾರಣೆಗೆ ಬಜೆಟ್ ಬೇಕಾಗಿಲ್ಲ. ಹೃದಯ ಬೇಕಾಗಿದೆ. ಶ್ರೀಸಾಮಾನ್ಯ ಈ ದೇಶದ ಚುನಾವಣೆಯಲ್ಲಿ ಭಾಗವಹಿಸಬಹುದು. ಚುನಾವಣೆಗಳಿಂದ ಈ ದೇಶದಲ್ಲಿ ಉತ್ತಮ ಫಲಿತಾಂಶ ಸಿಗಬಹುದು ಅನ್ನುವ ವಾತಾವರಣ ಮೂಡಿಸಬೇಕಾದರೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡ ಜನರ ಸಾಮಾನ್ಯ ಜನರ ವಿಶ್ವಾಸ ಹೆಚ್ಚಾಗಬೇಕಾದ್ರೆ ಚುನಾವಣೆಯ ಸುಧಾರಣೆಯಾಗಬೇಕಾಗಿದೆ.
ಇದು ಕೇಂದ್ರ ವ್ಯಾಪ್ತಿಯಲ್ಲಿ ಬಂದರೂ ಕೂಡಾ, ನಾವು ಒಂದು ನಿರ್ಣಯವೊಂದನ್ನು ಕೈಗೊಂಡು ಕಳುಹಿಸಿ ಕೇಂದ್ರದ ಮೇಲೆ ಒತ್ತಡ ತರುವುದು ಕಷ್ಟವೇನಲ್ಲ. ಹೀಗಾಗಿ ಈ ಬಗ್ಗೆ ಚಿಂತಿಸಬೇಕು ಎಂದು ಇಡೀ ಸದನ ಕೈಜೋಡಿಸಿ ಮನವಿ ಮಾಡಿದರು.
ಇದೇ ವೇಳೆ ಲೋಕಾಯುಕ್ತ ಕಾಯ್ದೆ ಕುರಿತಂತೆ ತೀವ್ರ ವಾಗ್ದಾಳಿ ನಡೆಸಿದ ರಮೇಶ್ ಕುಮಾರ್, ಜೂನ್ 30ರ ಒಳಗೆ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಸಬೇಕು ಅನ್ನುವ ಕಾನೂನು ಜಾರಿಗೆ ತರಲಾಗಿದೆ. ಆದರೆ ವಿವರ ಕೊಡದಿದ್ದರೆ ಏನು ಅನ್ನುವ ಕುರಿತಂತೆ ಏನನ್ನೂ ಹೇಳಿಲ್ಲ. ಕೆಲವರು ಆಸ್ತಿ ವಿವರ ಕೊಡಲು ನಿರಾಕರಿಸಿದ್ದಾರೆ.
ಆಸ್ತಿ ವಿವರಗಳನ್ನು ಕೊಡಬೇಕು, ಕೊಡದಿದ್ದರೆ ಏನೂ ಮಾಡಬೇಕು ಅನ್ನುವ ಕಾನೂನೇ ಇಲ್ಲ ಅಂದ ಮೇಲೆ ಯಾರನ್ನೂ ಮೆಚ್ಚಿಸಲು ಮಾಡಿದ ಶಾಸನ ಇದು. ಬದಲಾಗಿ ಅದನ್ನು ತೆಗೆದುಹಾಕುವುದೇ ಉತ್ತಮ. ಅದು ಜೀವಂತವಾಗಿರಬೇಕು, ಅದರ ಉದ್ದೇಶ ಸಾಧಿಸಬೇಕಾದರೆ ಆಸ್ತಿ ವಿವರ ಸಲ್ಲಿಸದವರಿಗೆ ಏನೂ ಪಾಠ ಅನ್ನುವ ಕಾಯ್ದೆ ರೂಪಿಸಿ, ಇದರ ನಾಯಕತ್ವವನ್ನು ಯಡಿಯೂರಪ್ಪ ಅವರೇ ವಹಿಸಿಕೊಳ್ಳಿ ಎಂದು ಮನವಿ ಮಾಡಿದರು.
ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಕೋಟಿ ಕೋಟಿ ಮೊತ್ತದ ಆಸ್ತಿ ವಿವರಗಳನ್ನು ನೀಡಲಾಗುತ್ತದೆ. ಆದರೆ ಚುನಾವಣೆ ಆಯೋಗದವರು ಈ ಆಸ್ತಿ ಬಗ್ಗೆ ವಿಚಾರಣೆ ನಡೆಸುವುದೇ ಇಲ್ಲ. ಎಲ್ಲಿಂದ ಬಂತು ಆಸ್ತಿ, ಹೇಗೆ ಬಂತು ಅನ್ನುವ ಕುರಿತಂತೆ ಚುನಾವಣಾ ಆಯೋಗ ಜೀವಮಾನದಲ್ಲಿ ತನಿಖೆ ಮಾಡಿಲ್ಲ.
ನೂರು ಕೋಟಿಯಲ್ಲ, ಹತ್ತು ಸಾವಿರ ಕೋಟಿ ಎಂದು ದಾಖಲಿಸಿದರೂ ಏನಾಗುವುದಿಲ್ಲ. ಕೆಲಸಕ್ಕೆ ಬಾರದ ಜನರಿಗೆ ವಂಚನೆ ಮಾಡುವ ಕಾಯ್ದೆಗಳನ್ನು ಇಟ್ಟುಕೊಂಡು ಮಾಡುವುದಾದರೂ ಏನು ಎಂದು ರಮೇಶ್ ಕುಮಾರ್, ನಾಮಪತ್ರ ಸಲ್ಲಿಸುವ ವೇಳೆ ಆಸ್ತಿ ವಿವರದ ಅಫಿಢವಿಟ್ ಬಂದ ತಕ್ಷಣ ಆಯೋಗ ವಿಚಾರಣೆ ನಡೆಸಬೇಕು. ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಿ ಎಲ್ಲರ ಹಣೆ ಬರಹ ಬಿಚ್ಚಿ ಬೆತ್ತಲು ಮಾಡಿ ಜನರ ಮುಂದಿಡಬೇಕು. ಆಗ ಪ್ರಜಾಪಪ್ರಭುತ್ವ ಉಳಿಯುತ್ತದೆ. ಜನರಿಗೆ ನೆಮ್ಮದಿ ಸಿಗುತ್ತದೆ ಎಂದರು.
Discussion about this post