ಇದೇ ವರ್ಷದ ಜುಲೈ ತಿಂಗಳಲ್ಲಿ ನಡೆದ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯಕ ತಪ್ಪಿನಿಂದ ಅನೇಕ ಮಂದಿ ದೃಷ್ಟಿ ಕಳೆದುಕೊಂಡಿದ್ದರು. ಘಟನೆ ನಡೆದು 3 ತಿಂಗಳ ಬಳಿಕ ಹೋರಾಟ ಪ್ರಾರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಸಂತ್ರಸ್ಥರಿಗೆ ಪರಿಹಾರ ಬೇಕು ಎಂದು ಆಗ್ರಹಿಸಿದೆ.
ಈ ಸಂಬಂಧ ಶುಕ್ರವಾರ ಮಿಂಟೋ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ತರಬೇತಿಯಲ್ಲಿದ್ದ ವೈದ್ಯರೊಬ್ಬರು ಆಂಗ್ಲ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದರಿಂದ ಕೆರಳಿದ ಕರವೇ ಕಾರ್ಯಕರ್ತರು ಕನ್ನಡದಲ್ಲಿ ಪ್ರತಿಕ್ರಿಯಿಸಿ ಅಂದಿದ್ದಾರೆ. ಜೊತೆಗೆ ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಕ್ಷಮೆ ಕೇಳಲು ವೈದ್ಯರು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಆದರೆ ಈ ಬಗ್ಗೆ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಕರವೇ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಅಶ್ವಿನಿ ಗೌಡ, ನೊಂದವರ ಪರವಾಗಿ ಪ್ರತಿಭಟನೆ ಮಾಡಿದ್ದು ನಿಜ. ಅಂಗ್ಲ ಭಾಷೆಯಲ್ಲಿ ಮಾತನಾಡಿದ್ದ ವೈದ್ಯೆಯನ್ನು ಕ್ಷಮೆ ಕೇಳುವಂತೆ ಆಗ್ರಹಿಸಿದ್ದು ಕೂಡಾ ಹೌದು. ಆದರೆ ನಾವು ಹಲ್ಲೆ ಮಾಡಿಲ್ಲ ಅಂದಿದ್ದಾರೆ.
ಈ ನಡುವೆ ಕರವೇ ವರ್ತನೆಯನ್ನು ಖಂಡಿಸಿರುವ ಬೆಂಗಳೂರು ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ 9 ಗಂಟೆಯವರೆಗೂ ಪ್ರತಿಭಟನೆ ನಡೆಸಿದ್ದಾರೆ. ಕರವೇ ಕಾರ್ಯಕರ್ತರು ಕ್ಷಮೆ ಕೇಳದಿದ್ದರೆ ಶನಿವಾರದಿಂದ ಹೊರ ರೋಗಿಗಳ ವಿಭಾಗ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮಾತ್ರವಲ್ಲದೆ, ಕರ್ನಾಟಕ ರಕ್ಷಣಾ ವೇದಿಕೆಯ ಕೆಲ ಕಾರ್ಯಕರ್ತರ ಗುಂಪು ನಿನ್ನೆ ಮಿಂಟೋ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ ಇಂದು ಆಸ್ಪತ್ರೆ ಎದುರು ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ವೈದ್ಯರು ತಮ್ಮ ಹೋರಾಟ ಕೈಬಿಡದಿರಲು ನಿರ್ಧರಿಸಿದ್ದಾರೆ. ಮಿಂಟೋ ಆಸ್ಪತ್ರೆಯ ಓಪಿಸಿ ಮತ್ತು ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಚಟುವಟಿಕೆ ಬಂದ್ ಆಗಿದೆ.
ಕರ್ನಾಟಕ ವೈದ್ಯರ ಸಂಘದ ಅಧ್ಯಕ್ಷ ಡಾ. ರವೀಂದ್ರ ಅವರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹಲ್ಲೆ ಘಟನೆಯನ್ನು ಖಂಡಿಸಿದ್ದಾರೆ. ಕೆಲ ಸಂಘಟನೆಗಳು ಪ್ರಚಾರದ ಹುಚ್ಚಿಗೆ ಈ ರೀತಿ ಮಾಡುತ್ತಿವೆ. ಇದು ಕರವೇ ಸಂಘಟನೆ ಹಾಗೂ ಅದರ ಮುಖಂಡ ನಾರಾಯಣ ಗೌಡ ಅವರಿಗೆ ಮಾಡಿದ ಅವಮಾನವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಡಾ. ರವೀಂದ್ರ, ಹೆಣ್ಮಕ್ಕಳ ಮೇಲೆ ಹಲ್ಲೆ ನಡೆಸಿದವರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ಧಾರೆ.
Discussion about this post