ಕನಕಪುರದ ಬಂಡೆ ಎಂದೇ ಖ್ಯಾತರಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಮಾತನಾಡುವವರ ಕೊರತೆ ಬಿಜೆಪಿಯಲ್ಲಿತ್ತು. ಯಾವಾಗ ಡಾ. ಅಶ್ವಥ್ ನಾರಾಯಣ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟ ಕಟ್ಟಲಾಯ್ತೋ, ಅವರು ಡಿಕೆಶಿ ವಿರುದ್ಧ ಗುಡುಗಲಾರಂಭಿಸಿದ್ದಾರೆ.
ಕೆಲ ದಿನಗಳ ಹಿಂದೆ ಡಿಕೆ ಸುರೇಶ್ ಅವರ ಹೇಳಿಕೆಗೆ ಕೌಂಟರ್ ಕೊಟ್ಟಿದ್ದ ಡಿಸಿಎಂ, ಡಿಸೆಂಬರ್ 9 ಕಳೆಯಲಿ, ಕ್ಲೀನಿಂಗ್ ರಾಮನಗರ ಮಾಡುತ್ತೇನೆ ಅಂದಿದ್ದರು.
ಈ ಹೇಳಿಕೆಗೆ ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್, ಗುಡ್… ಒಳ್ಳೆಯದಾಗಲಿ… ರಾಮನಗರದಿಂದ ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆದವರು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ನಾನು ಕೂಡ ಮಂತ್ರಿ ಆಗಿದ್ದವನು.
ನಮ್ಮಿಂದ ಮಾಡಲು ಸಾಧ್ಯವಾಗದನ್ನು ಅವರು ಮಾಡುತ್ತೇನೆ ಅಂತಿದ್ದಾರೆ.ಅದನ್ನು ನಾವು ಸ್ವಾಗತಿಸಬೇಕು. ಒಳ್ಳೆ ಕೆಲಸವನ್ನು ನಾವು ವಿರೋಧಿಸುವುದಿಲ್ಲ. ಅವರಿಗೆ ಆಲ್ ದಿ ಬೆಸ್ಟ್ ಅಂದಿದ್ದಾರೆ.
ಇದೇ ವೇಳೆ ಕನಕಪುರದಲ್ಲಿ ಸ್ಥಾಪಿಸಲು ಉದ್ದೇಶಿಸಿದ ಮೆಡಿಕಲ್ ಕಾಲೇಜು ಯೋಜನೆಯನ್ನು ರದ್ದುಗೊಳಿಸಿರುವುದರ ವಿರುದ್ಧ ಕಿಡಿ ಕಾರಿದ ಡಿಕೆಶಿ, ಕನಕಪುರ ಮೆಡಿಕಲ್ ಕಾಲೇಜು ಯೋಜನೆಗೆ ಸರ್ಕಾರ ಮರು ಆದೇಶ ನೀಡುವ ವಿಶ್ವಾಸವಿದೆ. ಒಂದು ವೇಳೆ ಆದೇಶ ನೀಡದಿದ್ದರೆ ನಾನು ನನ್ನ ಹೋರಾಟ ಮಾಡುತ್ತೇನೆ. ಹೋರಾಟ ಹೇಗಿರುತ್ತದೆ ಎಂದು ಹೇಳುವುದಿಲ್ಲ, ನೀವೇ ನೋಡುತ್ತೀರಿ ಅಂದಿದ್ದಾರೆ.
ಯಡಿಯೂರಪ್ಪನವರು ಕೂಡ ಹೋರಾಟ ಮಾಡಿಕೊಂಡೆ ರಾಜಕೀಯದಲ್ಲಿ ಬೆಳೆದವರು. ನಾವು ಅದನ್ನೇ ಮಾಡುತ್ತೇವೆ. ನಮಗೆ ಹೋರಾಟ ಮಾಡಲು ಸಾವಿರಾರು ಜನರನ್ನ ಕರೆದುಕೊಂಡು ಬರಬೇಕಿಲ್ಲ ಅಂದರು.
Discussion about this post