ಮಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನ್ ಲಾಕ್ ಆಗಿರುವುದು ಇದೀಗ ದಕ್ಷಿಣ ಕನ್ನಡ ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. ಅಂತರ್ ಜಿಲ್ಲಾ ಓಡಾಟಕ್ಕೆ ಇದ್ದ ನಿರ್ಬಂಧವನ್ನು ಮುಖ್ಯಮಂತ್ರಿಗಳು ತೆಗೆದುಹಾಕಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಗೆ ಎಗ್ಗಿಲ್ಲದೆ ಪ್ರಯಾಣಿಕರು ದೌಡಾಯಿಸುತ್ತಿದ್ದಾರೆ.
ಅದರಲ್ಲೂ ದೇವಸ್ಥಾನಗಳು ಬಾಗಿಲು ಮುಚ್ಚಿದ್ದರೂ ಕುಕ್ಕೆ ಸುಬ್ರಹ್ಮಣ್ಯ, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಕುಕ್ಕೆಗೆ ಬಂದ ಭಕ್ತರನ್ನು ವಾಪಾಸ್ ಕಳುಹಿಸುವ ಕಾರ್ಯ ನಡೆಯುತ್ತಿದೆ. ಕಡಬ ಹಾಗೂ ಸುಳ್ಯ ತಾಲೂಕಿನಲ್ಲಿ ಸೋಂಕು ಹೆಚ್ಚಾಗಿರುವ ಕಾರಣ ಪೊಲೀಸ್ ಇಲಾಖೆ ಇಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.

ಆದರೆ ಬೆಳ್ತಂಗಡಿ ತಾಲೂಕಿನಲ್ಲಿ 8 ಗ್ರಾಮಗಳು ಸೀಲ್ ಡೌನ್ ಆಗಿದ್ದರೂ ಹೊರ ಊರಿನಿಂದ ಬಂದ ಭಕ್ತರನ್ನು ಆದರದಿಂದ ಸ್ವಾಗತಿಸಲಾಗುತ್ತಿದೆ. ಅದರಲ್ಲೂ ಧರ್ಮಸ್ಥಳ ಗ್ರಾಮಕ್ಕೆ ಬರೋ ಭಕ್ತರು ನೇತ್ರಾವತಿ ಸ್ನಾನ ಘಟ್ಟದಲ್ಲಿ ಕಿಕ್ಕಿರಿದು ಸೇರುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಮಾಹಿತಿ ಪ್ರಕಾರ ಸ್ನಾನ ಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿದವರು ದೇವರ ದರ್ಶನವನ್ನೂ ಪಡೆಯುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ದೇವಸ್ಥಾನಗಳು ಕೊರೋನಾ ಕಾರಣದಿಂದ ಬಾಗಿಲು ಹಾಕಿದ್ದರೂ ಇಲ್ಲಿ ದೇವಸ್ಥಾನ ಭಕ್ತರಿಗೆ ತೆರೆದಿರುವುದು ಅಚ್ಚರಿ ಮೂಡಿಸಿದೆ. ಇನ್ನು ಸ್ನಾನ ಘಟ್ಟಕ್ಕೆ ಬರುವವರು ಕೇಶ ಮುಂಡನವನ್ನೂ ಮಾಡಿಸಿಕೊಂಡಿರುವುದು ಗ್ರಾಮಪಂಚಾಯತ್ ಸದಸ್ಯರ ಹೇಳಿಕೆಗೆ ಪುಷ್ಟಿ ನೀಡಿದೆ. ಇನ್ನು ಕೆಲ ದಿನಗಳ ಹಿಂದೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ಅರವಿಂದ ಲಿಂಬಾವಳಿ ದೇವರ ದರ್ಶನ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಬಳಿಕ ಸಚಿವರು ಸ್ಪಷ್ಟನೆಯನ್ನೂ ಕೊಟ್ಟಿದ್ದರು.

ಒಂದು ವೇಳೆ ದೇವಸ್ಥಾನ ತೆರೆದಿದ್ದೇ ಆಗಿದ್ದಲ್ಲಿ, ಇದಕ್ಕಿಂದ ದೊಡ್ಡ ದುರಂತ ಮತ್ತೊಂದಿಲ್ಲ. ಈಗಾಗಲೇ ಬೆಳ್ತಂಗಡಿಯ 8 ಗ್ರಾಮಗಳು ಸೀಲ್ ಡೌನ್ ಆಗಿದೆ. 9ನೇ ಗ್ರಾಮವಾಗಿ ಧರ್ಮಸ್ಥಳ ಸೀಲ್ ಡೌನ್ ಆದರೂ ಅಚ್ಚರಿ ಇಲ್ಲ. ಇಡೀ ದೇಶ ಕೊರೋನಾ ಸೋಲಿಸಲು ಹೋರಾಡುತ್ತಿದ್ರೆ ಬುದ್ದಿವಂತರ ಜಿಲ್ಲೆಯ ಗ್ರಾಮವೊಂದರ ದಡ್ಡತನವನ್ನು ಕ್ಷಮಿಸಲು ಸಾಧ್ಯವಿಲ್ಲ. ಲಾಕ್ ಡೌನ್ ಇರೋ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಯವರನ್ನು ಬಿಡುವುದೇ ತಪ್ಪು ಹಾಗಿದ್ದರೂ ಕನಿಷ್ಟ ಪಕ್ಷ ಸ್ನಾನ ಘಟ್ಟಕ್ಕೆ ಬರೋ ಭಕ್ತರ ಸ್ವ್ಯಾಬ್ ಟೆಸ್ಟ್ ಮಾಡುವ ಬಗ್ಗೆಯಾದರೂ ಚಿಂತಿಸಬೇಕಲ್ವ.

Discussion about this post