ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆಯ ಕುರಿತಂತೆ ತಜ್ಞರಲ್ಲೇ ಗೊಂದಲ ಇನ್ನೂ ಮುಂದುವರಿದಿದೆ. ಕೆಲವರ ಪ್ರಕಾರ ಮೂರನೇ ಅಲೆ ಮಕ್ಕಳಿಗೆ ದೊಡ್ಡ ಸಮಸ್ಯೆ ಮಾಡೋದಿಲ್ಲವಂತೆ. ಮತ್ತೆ ಕೆಲ ತಜ್ಞರು ಮೂರನೇ ಅಲೆ ಮಕ್ಕಳಿಗೆ ಅಪಾಯ ಅನ್ನುತ್ತಿದ್ದಾರೆ.
ಆದರೆ ಮೂರನೇ ಅಲೆಯಲ್ಲಿ ವೈರಸ್ ಮಕ್ಕಳನ್ನೇ ಹುಡುಕಿಕೊಂಡು ಬರೋದಿಲ್ಲ. ಹಾಗಿದ್ದರೂ ಬಹುತೇಕ ವಯಸ್ಕರಿಗೆ ಲಸಿಕೆಯಾಗಿರುತ್ತದೆ. ಲಸಿಕೆಯಾಗಿದೆ ಅನ್ನುವ ಕಾರಣಕ್ಕೆ ಅವರೆಲ್ಲಾ ಬೀದಿ ಬೀದಿ ಸುತ್ತುತ್ತಾರೆ. ಈ ವೇಳೆ ಲಸಿಕೆಯಾಗದ ಮಕ್ಕಳೇ ಟಾರ್ಗೆಟ್ ಆಗುವ ಸಾಧ್ಯತೆಗಳಿದೆ.
ಈ ನಡುವೆ 3ನೇ ಅಲೆಯ ಅಧ್ಯಯನ ಕುರಿತಂತೆ ರಾಜ್ಯ ಸರ್ಕಾರ ನೇಮಿಸಿರುವ ಡಾ. ದೇವಿ ಶೆಟ್ಟಿ ನೇತೃತ್ವದ ಸಮಿತಿ ಪ್ರಾಥಮಿಕ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದು, ರಾಜ್ಯದಲ್ಲಿ 1 ರಿಂದ 1.50 ಲಕ್ಷ ಮಕ್ಕಳಿಗೆ ಸೋಂಕು ತಗುಲಬಹುದು ಅಂದಿದೆ.
ಈ ಪೈಕಿ 50 ರಿಂದ 60 ಸಾವಿರ ಮಕ್ಕಳಲ್ಲಿ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು. 5 ಸಾವಿರ ಮಕ್ಕಳಿಗೆ ತೀವ್ರ ನಿಗಾ ಘಚಕದ ಅವಶ್ಯಕತೆ ಬೀಳಬಹುದು. ಪ್ರತೀ ನಿತ್ಯ 500 ಮಕ್ಕಳು ಐಸಿಯುಗೆ ದಾಖಲಾಗಬಹುದು ಎಂದು ಅಂದಾಜಿಸಿದೆ. ಆದರೆ ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರ ಸೂಕ್ತ ಸಿದ್ದತೆ ನಡೆಸಿದರೆ ಇದರ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಈ ಅಪಾಯವನ್ನು ಎದುರಿಸುವ ನಿಟ್ಟಿನಲ್ಲೂ ಸಮಿತಿ ಹಲವು ಗಂಭೀರ ಸಲಹೆಗಳನ್ನು ಕೊಟ್ಟಿದೆ. ಕೊಟ್ಟಿರುವ ಸಲಹೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದರೆ ಮೂರನೇ ಅಲೆ ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ. ಆದರೆ ಕುರ್ಚಿಯ ಆತಂಕದಲ್ಲಿರುವ ಮುಖ್ಯಮಂತ್ರಿಗಳು ಈ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆಯೇ ಅನ್ನುವುದು ಈಗಿರುವ ಪ್ರಶ್ನೆ.
Discussion about this post