ಈವರೆಗೆ ಉಸಿರಾಟ, ಕೆಮ್ಮು, ಶೀನು ಹೀಗೆ ಗಾಳಿ ಮೂಲಕ ಕೊರೋನಾ ಸೋಂಕು ಹೆಚ್ಚಾಗಿ ಹರಡುತ್ತದೆ ಎಂದು ಹೇಳಲಾಗಿತ್ತು. ಹೀಗಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿ ಎಂದು ಮನವಿ ಮಾಡಲಾಗುತ್ತಿದೆ. ಆದರೆ ಇದೀಗ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ತಜ್ಞರ ಸಂಶೋಧನೆಯ ಪ್ರಕಾರ ಕಣ್ಣೀರಿನ ಮೂಲಕವೂ ಕೊರೋನಾ ಸೋಂಕು ಹರಡುತ್ತದೆಯಂತೆ.
ಪಂಜಾಬ್ನ ಸರ್ಕಾರಿ ಮೆಡಿಕಲ್ ಕಾಲೇಜಿನ ಸಂಶೋಧಕರ ಸಂಶೋಧನೆಯಲ್ಲಿ ಇದು ಸಾಬೀತುಗೊಂಡಿದ್ದು, ಅಮೃತಸರದಲ್ಲಿರುವ ಕಾಲೇಜಿನ ಸಂಶೋಧಕರು 120 ಕೋವಿಡ್ ರೋಗಿಗಳ ಮೇಲೆ ಅಧ್ಯಯನ ನಡೆಸಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಅಧ್ಯಯನಕ್ಕೆ ಆರಿಸಲಾದ 120 ರೋಗಿಗಳ ಪೈಕಿ 60 ಮಂದಿಗೆ ನೇತ್ರ ಸಂಬಂಧಿ ತೊಂದರೆ ಇತ್ತು. ಇನ್ನುಳಿದ 60 ಮಂದಿಗೆ ಇಂಥ ಲಕ್ಷಣಗಳು ಇರಲಿಲ್ಲ. ಕಣ್ಣಿನ ತೊಂದರೆಯ ಲಕ್ಷಣಗಳಿದ್ದ 60 ಮಂದಿಯ ಪೈಕಿ ಶೇ. 37 ಮಂದಿಗೆ ಸಾಧಾರಣ ಕೋವಿಡ್ ಸೋಂಕು ಇದ್ದರೆ ಇನ್ನುಳಿದವರಿಗೆ ಕೋವಿಡ್ ಸೋಂಕಿನ ತೀವ್ರತೆ ಹೆಚ್ಚು ಇತ್ತು. ಇನ್ನು, ಕಣ್ಣಿನ ಸಮಸ್ಯೆಯ ಲಕ್ಷಣಗಳಿಲ್ಲದ ಇತರ 60 ಮಂದಿಯ ಪೈಕಿ ಶೇ. 52 ಮಂದಿಗೆ ಕೋವಿಡ್ ಸೋಂಕು ಸಾಧಾರಣ ಇದ್ದರೆ ಇನ್ನುಳಿದವರ ಸೋಂಕಿನ ತೀವ್ರತೆ ತುಂಬಾ ಅಧಿಕ ಇತ್ತು ಎಂದು ಈ ಅಧ್ಯಯನದಲ್ಲಿ ಗೊತ್ತಾಗಿದೆ,
ಕೊರೋನಾ ಸೋಂಕಿತರ ಕಣ್ಣೀರಿನ ಸ್ಯಾಂಪಲ್ ಅನ್ನು ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಡ್ಡಿದಾಗ ಶೇ. 17.5 ಮಂದಿಗೆ ಪಾಸಿಟಿವ್ ಬಂದಿದೆ. ಈ ರೀತಿ ಪಾಸಿಟಿವ್ ಬಂದವರಲ್ಲಿ ಶೇ. 9.16 ಮಂದಿಗೆ ಕಣ್ಣು ಸಂಬಂಧಿತ ತೊಂದರೆಗಳಿತ್ತು. ಶೇ. 8.33 ಮಂದಿಗೆ ಕಣ್ಣಿನ ಸಮಸ್ಯೆ ಇರಲಿಲ್ಲ.
Discussion about this post