ನವದೆಹಲಿ : ದೇಶದಲ್ಲಿ ಇಳಿಕೆಯಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಮತ್ತೆ ಏರಲಾರಂಭಿಸಿದೆ. ಅದರಲ್ಲೂ ಕೇರಳ ಸೇರಿದಂತೆ ಒಂದೆರೆಡು ರಾಜ್ಯಗಳ ದಿವ್ಯ ನಿರ್ಲಕ್ಷ್ಯದಿಂದ ಕೊರೋನಾ ಸೋಂಕಿತರ ಸಂಖ್ಯೆ ನಿಯಂತ್ರಣ ತಪ್ಪಲಾರಂಭಿಸಿದೆ. ಕೇರಳದಲ್ಲಿ ಕೊರೋನಾ ಸೋಂಕಿತರ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಹೊರತು ಕೊರೋನಾ ಸೋಂಕು ನಿಯಂತ್ರಣಕ್ಕೆ ಕಾಳಜಿ ವಹಿಸಲಾಗುತ್ತಿಲ್ಲ. ಹೀಗಾಗಿಯೇ ಒಂದು ವಾರದಿಂದಲೂ ದಿನನಿತ್ಯ ಕೊರೋನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 41,649 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಅರ್ಧದಷ್ಟು ಪ್ರಕರಣ ಕೇರಳವೊಂದರಲ್ಲೇ ವರದಿಯಾಗಿದೆ. ಕಳೆದ ವಾರ ಇದೇ ಸಂಖ್ಯೆ 29-30 ಸಾವಿರದ ಅಂಚಿನತ್ತು. ಆದರೆ ಈಗ ಈ ಸಂಖ್ಯೆ ಡಬಲ್ ಆಗಿರುವುದನ್ನು ನೋಡಿದರೆ ಮೂರನೇ ಅಲೆ ಎಂಟ್ರಿ ಕೊಟ್ಟಿದೆಯೇ ಅನ್ನುವ ಅನುಮಾನ ಶುರುವಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 37,291 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 593 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ಈ ಮೂಲಕ ದೇಶದಲ್ಲಿ ಈವರೆಗೆ ಒಟ್ಟು 3,16,13,993 ಕೊರೋನಾ ಪ್ರಕರಣಗಳು ದಾಖಲಾದಂತಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 4,08,920ಕ್ಕೆ ತಲುಪಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ 4,23,810 ಆಗಿದೆ.
ಅನ್ ಲಾಕ್ ಪ್ರಕ್ರಿಯೆ ಪ್ರಾರಂಭಗೊಂಡ ಬೆನ್ನಲ್ಲೇ ಮಾಸ್ಕ್ ಮರೆತು, ಸಾಮಾಜಿಕ ಅಂತರ ಪಾಲಿಸದೆ ಓಡಾಡುತ್ತಿರುವುದೇ ಸೋಂಕಿನ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಜೊತೆಗೆ ಮಾರುಕಟ್ಟೆ, ಬಸ್ ಓಡಾಟಗಳು ಕೂಡಾ ಸೋಂಕು ಏರಿಕೆಗೆ ಕಾರಣವಾಗಿದೆ.ಅಷ್ಟೇ ಅಲ್ಲದೆ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸೋಂಕು ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ. ಈಗಾಗಲೇ ತಜ್ಞರು ಹೇಳಿದಂತೆ ಮೂರನೇ ಅಲೆ ಮಕ್ಕಳನ್ನು ಕಾಡುವ ಸಾಧ್ಯತೆಗಳಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಮೂರನೇ ಅಲೆ ಡೆಲ್ಟಾ ಅಲೆಯಾದರೆ ಎರಡನೇ ಅಲೆಗಿಂತ ಭೀಕರ ಪರಿಸ್ಥಿತಿಯನ್ನು ದೇಶ ಎದುರಿಸಬೇಕಾಗುತ್ತದೆ.
Discussion about this post