ಬೆಂಗಳೂರು : ಕೇರಳದಲ್ಲಿ ಸೋಂಕಿನ ಅಬ್ಬರ ಹೆಚ್ಚಾಗುತ್ತಿರುವ ಕಾರಣ ಸಹಜವಾಗಿಯೇ ಕರ್ನಾಟಕದಲ್ಲಿ ಆತಂಕ ಮನೆ ಮಾಡಿದೆ. ಪೂರಕ ಅನ್ನುವಂತೆ ಕೇರಳದ ಗಡಿ ಭಾಗಗಳಲ್ಲಿ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಳ್ಳಿಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದ್ದು, ಮೂರನೇ ಅಲೆಯ ಮುನ್ನುಡಿಯಂತೆ ಗೋಚರಿಸುತ್ತಿದೆ.
ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಸೋಂಕು ಇರುವ 20 ಹಳ್ಳಿಗಳ ಪೈಕಿ 11 ಗ್ರಾಮಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ಕಳೆದ 7 ದಿನಗಳಲ್ಲಿ ಅತಿ ಹೆಚ್ಚು ಸೋಂಕು ಹೆಚ್ಚಾಗಿರುವ ಗ್ರಾಮಗಳ ಪೈಕಿ 5 ಗ್ರಾಮಗಳು ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ 6 ಗ್ರಾಮಗಳಿದೆ.
ದಕ್ಷಿಣ ಕನ್ನಡದ ಗುತ್ತಿಗಾರು, ಮಲವೂರು, ಹಾಗೂ ಮುಂಡೂರು ಗ್ರಾಮಗಳು ಮೊದಲ ಮೂರು ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು, ಮತ್ತು ಪೆರ್ಡೂರು ಗ್ರಾಮಗಳಿದ್ದು, ಉತ್ತರ ಕನ್ನಡದ ಹೊನ್ನಾವರ ನಂತರದ ಸ್ಥಾನದಲ್ಲಿದೆ.
ಕಳೆದ ವಾರ ಗುತ್ತಿಗಾರಿನಲ್ಲಿ ಒಂದೇ ಒಂದು ಪ್ರಕರಣವಿರಲಿಲ್ಲ, ಇದೀಗ ಅಲ್ಲಿ 14 ಪ್ರಕರಣಗಳು ಪತ್ತೆಯಾಗಿದೆ. ಕಳೆದ ವಾರ 1 ಪ್ರಕರಣವಿದ್ದ ಮಲವೂರು ಮತ್ತು ಮುಂಡೂರು, ಕೊಲ್ಲೂರು, ಪೆರ್ಡೂರು ಗ್ರಾಮದಲ್ಲಿ 12 ಕ್ಕೂ ಅಧಿಕ ಪ್ರಕರಣ ಪತ್ತೆಯಾಗಿದೆ. ಹೊನ್ನಾವರದಲ್ಲೂ ಕಳೆದ ವಾರ ಸೋಂಕಿತರೇ ಇರಲಿಲ್ಲ, ಇದೀಗ 12 ಪ್ರಕರಣಗಳು ಅಲ್ಲಿ ಪತ್ತೆಯಾಗಿದೆ.
ಇನ್ನು ಕರಾವಳಿಯಲ್ಲಿ ಸೋಂಕು ಕಂಡು ಬಂದಿರುವ ಟ್ರಾವೆಲ್ ಹಿಸ್ಟರಿಯನ್ನು ನೋಡಿದರೆ ಬಹುತೇಕರು ಕೇರಳಕ್ಕೆ ಹೋಗಿ ಬಂದವರಾಗಿದ್ದಾರೆ ಅಥವಾ ಕೇರಳಕ್ಕೆ ಹೋಗಿ ಬಂದವರೊಂದಿಗೆ ಸಂಪರ್ಕ ಬೆಳೆಸಿದವರಾಗಿದ್ದಾರೆ.
ಇನ್ನು ದಕ್ಷಿಣ ಕನ್ನಡದ ಕೋಟೆಕಾರ್, ಬಂಟ್ವಾಳ, ಸುಳ್ಯ ಮತ್ತು ಪುತ್ತೂರು, ಉತ್ತರ ಕನ್ನಡದ ಶಿರಸಿ, ಕಾರವಾರ, ಕೊಡಗಿನ ಕುಶಾಲನಗರ, ಮಡಿಕೇರಿ, ಚಿತ್ರದುರ್ಗದ ಹಿರಿಯೂರು, ಕಲಬುರಗಿಯ ಬೀದರ್, ಉಡುಪಿಯ ಕುಂದಾಪುರ, ಬಳ್ಳಾರಿ, ಬೆಳಗಾವಿಯ ರಾಯಭಾಗ, ಚಿಕ್ಕಮಗಳೂರಿನ ಎನ್ ಆರ್ ಪುರ ಕೊರೋನಾ ಹಾಟ್ ಸ್ಪಾಟ್ ಗಳಾಗಿವೆ.
Discussion about this post