ಕಾಂಗ್ರೆಸ್ ಅಂದರೆ ಇಂದಿರಾ,ಇಂದಿರಾ ಅಂದರೆ ಕಾಂಗ್ರೆಸ್ ಅನ್ನುವ ದಿನವಿತ್ತು. ಈ ಕಾರಣಕ್ಕಾಗಿ ಕಾಂಗ್ರೆಸ್ ಆಡಳಿತ ಕಾಲದಲ್ಲಿ ಇಂದಿರಾ ಹೆಸರನ್ನು ಶಾಶ್ವತವಾಗಿಸಲು ಇರೋ ಬರೋ ಯೋಜನೆಗಳಿಗೆ ಇಂದಿರಾ ಹೆಸರು ಇಡಲಾಗಿತ್ತು ಇದಕ್ಕೆ ನೆಹರೂ ಹೆಸರೂ ಹೊರತಲ್ಲ.
ಆದರೆ ಇದೀಗ ಇಂದಿರಾ ಹಾಗೂ ನೆಹರೂ ಅವರನ್ನು ಕಾಂಗ್ರೆಸ್ ಮರೆಯುತ್ತಿದೆಯೇ ಅನ್ನುವ ಸಂಶಯ ಬರಲಾರಂಭಿಸಿದೆ.
ಇದಕ್ಕೆ ಸಾಕ್ಷಿ ಅನ್ನುವಂತೆ ಸಿಕ್ಕಿದ್ದು, ಶನಿವಾರ ಬೆಂಗಳೂರಿನಲ್ಲಿ ಚಿದಂಬರಂ ನೀಡಿದ ಹೇಳಿಕೆ.
ಕಾಂಗ್ರೆಸ್ ಸಂಘಟನೆ ಹಾಗೂ ಕಾರ್ಯಕರ್ತರ ಜೊತೆ ನೇರ ಸಂಪರ್ಕ ಕಲ್ಪಿಸುವ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು “ಒಂದು ಕಾಲವಿತ್ತು ಅಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಹೆಸರನ್ನು ಹೇಳಿದರೆ ಸಾಕು ಲಕ್ಷಾಂತರ ಮತದಾರರು ಮತಗಟ್ಟೆಗೆ ಬಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಿದ್ದರು. ಅದೇ ರೀತಿ ಇಂದಿನ ಚುನಾವಣೆ ಬೂತ್ ಮಟ್ಟದ್ದಾಗಿದ್ದು ಅದಕ್ಕಾಗಿಯೇ ಪ್ರತಿ ಬೂತ್ ನಲ್ಲೂ ನಾವು ಇರಬೇಕು. ಪ್ರತಿ ಬೂತ್ ನಲ್ಲೂ ಸಾಕಷ್ಟು ಜನರನ್ನು ಹೊಂದಿರಬೇಕು” ಎಂದಿದ್ದಾರೆ.
ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಟವಾಗದಿದ್ದರೆ, 2019 ರ ಚುನಾವಣೆ ಎದುರಿಸುವುದು ಕಷ್ಟ ಅನ್ನುವ ಮಾತನ್ನು ಅವರು ಹೇಳಿದ್ದು,ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತ ಯೋಜನೆ ಕಾಂಗ್ರೆಸ್ ಬುಡವನ್ನು ಅಲುಗಾಡಿಸುತ್ತಿದೆ ಅನ್ನುವುದನ್ನು ಪರೋಕ್ಷವಾಗಿ ಹೇಳಿದರು.
ಜೊತೆಗೆ ಕರಾವಳಿ ಬಗ್ಗೆಯೂ ಪ್ರಸ್ತಾಪಿಸಿರುವ ಅವರು “ಕರ್ನಾಟಕದಲ್ಲಿ ಕರಾವಳಿ ಬಿಟ್ಟರೆ, ಬೇರೆ ಎಲ್ಲೂ ಬಿಜೆಪಿ ಹೆಚ್ಚು ಮತಗಳಿಸಿಲ್ಲ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶೇಕಡಾ 38 ರಷ್ಟು ಮತ ಪಡೆದಿದ್ದೇವೆ. ಇಂದು ಬೂತ್ ಮಟ್ಟದಲ್ಲಿ ಹೆಚ್ಚು ಪೈಪೋಟಿ ಇದೆ.ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ ಗಳಿಕೆ ಶಕ್ತಿ ಇಲ್ಲ. ಕರಾವಳಿಯಲ್ಲಿ ಶೇಕಡಾ 50 ರಷ್ಟು ಮತ ಪಡೆದಿರುವ ಬಿಜೆಪಿ. ಉಳಿದ ಕಡೆ ೩೦% ಕಡಿಮೆ ಮತ ಪಡೆದಿದೆ. ಹೀಗಾಗಿ ನಾವು ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ. ಕರಾವಳಿ ಯಲ್ಲಿ ಬೂತ್ ಮಟ್ಟದಲ್ಲಿ ವೀಕ್ ಆಗಿದ್ದೇ ನಮ್ಮ ಚುನಾವಣಾ ಸೋಲಿಗೆ ಕಾರಣವಾಯಿತು. ಹೀಗಾಗಿಯೇ ಅಧ್ಯಕ್ಷರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಯೇ ಪಕ್ಷಕ್ಕೆ ಬೂತ್ ಮಟ್ಟದಲ್ಲಿ ಶಕ್ತಿ ತುಂಬಲು ಶಕ್ತಿ ಈ ಕಾರ್ಯಕ್ರಮ ಅನುಕೂಲವಾಗಲಿದೆ” ಎಂದಿದ್ದಾರೆ.
ಇಂದಿರಾ ಗಾಂಧಿಯನ್ನು ಅದೆಷ್ಟು ಟೀಕಿಸಿದರೂ,ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಜನ ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಇಂದಿರಾ ಹೆಸರಿನಲ್ಲಿ ಯೋಜನೆಗಳಿಗೆ ಇಡುವ ಬದಲು ಅವರ ಉತ್ತಮ ಯೋಜನೆಗಳಿಗೆ ಹೊಸ ರೂಪ ಕೊಟ್ಟಿದ್ದರೆ. ಇಂದು ಇಂದಿರಾ ಹೆಸರಿನಲ್ಲಿ ಮತ ಗಳಿಸುವುದು ಕಷ್ಟ ಅನ್ನುವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರೇ ಕೊಡುವ ಪರಿಸ್ಥಿತಿ ಬರುತ್ತಿರಲಿಲ್ಲ.