ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಲವೊಂದು ಯಡವಟ್ಟುಗಳ ಕಾರಣದಿಂದ ಇದೀಗ ಪಕ್ಷದ ಶಿಸ್ತಿನ ಶಾಸಕರು ಸಿಡಿದೆದ್ದಿದ್ದಾರೆ.
ಯಾವಾಗ ತಮ್ಮ ಕುರ್ಚಿಗೆ ಸಂಕಷ್ಟ ಗ್ಯಾರಂಟಿ ಅನ್ನುವುದು ಯಡಿಯೂರಪ್ಪ ಅವರಿಗೆ ಗೊತ್ತಾಯ್ತೋ, ಶಾಸಕರ ವಿಶ್ವಾಸ ಗಳಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.
ಮಂಗಳವಾರ ರಾತ್ರಿ ತಮ್ಮ ಮನೆಯಲ್ಲಿ ಊಟದ ಕಾರ್ಯಕ್ರಮ ಆಯೋಜಿಸಿದ್ದ ಯಡಿಯೂರಪ್ಪ , ಶಾಸಕರಿಗೆ ಊಟ ಕೊಟ್ಟು ಹೊಟ್ಟೆ ತಂಪಾಗಿಸುವ ಯತ್ನ ಮಾಡಿದ್ದಾರೆ.
ಆದರೆ ಈ ಭೋಜನ ಕೂಟಕ್ಕೆ 20 ಶಾಸಕರು ಗೈರು ಹಾಜರಾಗಿದ್ದಾರೆ. ನಿಮ್ಮ ಊಟ ಯಾರಿಗೆ ಬೇಕು, ಮೊದಲು ಶಿಸ್ತು ರೂಪಿಸಿಕೊಳ್ಳಿ ಅನ್ನುವ ಸ್ಪಷ್ಟ ಸಂದೇಶ ಕೊಟ್ಟಿದ್ದಾರೆ.
ಪಕ್ಷದ ಮುಖ್ಯಸಚೇತಕ ಸುನಿಲ್ ಕುಮಾರ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್,ಜಿ.ಎಚ್. ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ಅರವಿಂದ್ ಬೆಲ್ಲದ್ ಗೈರು ಹಾಜರಾದ ಪ್ರಮುಖ ಶಾಸಕರಾಗಿದ್ದಾರೆ.
ಈಗಾಗಲೇ ಅನುದಾನ ಹಂಚಿಕೆಯಲ್ಲಿ ಯಡಿಯೂರಪ್ಪ ಮಾಡಿರುವ ಅನ್ಯಾಯದ ವಿರುದ್ಧ ಶಾಸಕರು ಈಗಾಗಲೇ ಅಸಮಾಧನಗೊಂಡಿದ್ದಾರೆ. ಹೀಗಾಗಿ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಹೇಳಿಕೆಗಳು ಕೂಡಾ ಹೊರ ಬೀಳಲಾರಂಭಿಸಿದೆ.
ಹೀಗಾಗಿ ಎಲ್ಲಿ ಹೈಕಮಾಂಡ್ ಕಣ್ಣು ಕೆಂಪು ಮಾಡುತ್ತದೋ ಅನ್ನುವ ಭಯಕ್ಕೆ ಬಿದ್ದ ಯಡಿಯೂರಪ್ಪ ಶಾಸಕರನ್ನು ಕರೆದು ಊಟ ಹಾಕಿಸಿ ಸಮಾಧಾನ ಮಾಡೋ ಯತ್ನ ಮಾಡಿದ್ದಾರೆ.
ಆದರೆ 20 ಶಾಸಕರ ಗೈರು ಹಾಜರಿ ನೋಡಿದರೆ ಈಗ ಎಲ್ಲವೂ ಕೈ ಮೀರಿ ಹೋಗಿದೆ ಅನ್ನುವುದು ಸ್ಪಷ್ಟವಾಗುತ್ತದೆ.