ಬೆಂಗಳೂರು : ಕಳೆದ ವರ್ಷ ಕೊರೋನಾ ಕಾರ್ಮೋಡದ ಕಾರಣದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ವಿಘ್ನ ನಿವಾರಕನನ್ನು ಆರಾಧಿಸಲಾಗಿತ್ತು. ಈ ಬಾರಿಯೂ ಗಜಾನನ ಆರಾಧನೆಗೆ ವಿಘ್ನ ಎದುರಾಗಿದೆ. ಆದರೆ ಬಿಜೆಪಿ ನಾಯಕರೇ ಸಾರ್ವಜನಿಕ ಗಣೇಶೋತ್ಸವ ಅನುಮತಿ ಕೊಡಬೇಕು ಇಲ್ಲವಾದ್ರೆ ಪರಿಸ್ಥಿತಿ ಸರಿ ಇರೋದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಸ್ವಪಕ್ಷೀಯರ ಬೇಡಿಕೆಗಳೇ ಇದೀಗ ಸಿಎಂ ಬೊಮ್ಮಾಯಿಯವರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಹೀಗಾಗಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಈಗಾಗಲೇ ಹಬ್ಬ ಆಚರಣೆ ಕುರಿತಂತೆ ತಜ್ಞರ ವರದಿಯೊಂದನ್ನು ತರಿಸಿಕೊಳ್ಳಲಾಗಿದೆ. ಆದರೆ ತಜ್ಞರ ವರದಿಯಲ್ಲಿ ಹಬ್ಬಕ್ಕೆ ಅನುಮತಿ ಕೊಟ್ಟ ಕಾರಣಕ್ಕೆ ಕೇರಳದಲ್ಲಿ ಏನಾಯ್ತು ಅನ್ನುವುದನ್ನು ವಿವರಿಸಲಾಗಿದೆ. ಓಣಂ, ಬಕ್ರೀದ್ ಎಂದು ಅನುಮತಿ ಕೊಟ್ಟ ಕಾರಣದಿಂದಲೇ ಸೋಂಕು ವ್ಯಾಪಕವಾಗಿದೆ ಅನ್ನಲಾಗಿದೆ. ಇಲ್ಲೂ ಅನುಮತಿ ಕೊಟ್ಟರೆ 3ನೇ ಅಲೆಗೆ ನಾವೇ ಸ್ವಾಗತ ಕೊಟ್ಟ ಹಾಗಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಆದರೆ ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರ, ತಜ್ಞರ ಸಲಹೆಯನ್ನು ಒಪ್ಪುವುದು ಅನುಮಾನ ಎಂದು ಹೇಳಲಾಗುತ್ತಿದೆ. ಹೀಗಾಗಿ ಒಂದು ಅಥವಾ ಮೂರು ದಿನ ಸಾರ್ವಜನಿಕ ಗಣೇಶೋತ್ಸವ ಆಚರಿಸುವುದಕ್ಕೆ ಅನುಮತಿ ನೀಡುವ ಸಾಧ್ಯತೆಗಳಿದ್ದು, ಹಲವು ನಿಬಂಧನೆಗಳನ್ನು ಕೂಡಾ ವಿಧಿಸುವ ಸಾಧ್ಯತೆಗಳಿದೆ. ಜೊತೆಗೆ ಬೆಂಗಳೂರಿನಲ್ಲಿ ವಾರ್ಡ್ ಗೆ ಒಂದೇ ಗಣೇಶನನ್ನು ಕೂರಿಸಲು ಅನುಮತಿ ಕೊಡುವ ಬಗ್ಗೆಯೂ ಚಿಂತನೆಗಳಿದೆ.
ಇನ್ನು ಹಬ್ಬದ ದಿನ ದೇವಸ್ಥಾನಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕೊಡುವ ನಿರೀಕ್ಷೆಯಿದ್ದು, ದೇವಸ್ಥಾನ, ಮನೆಗಳಲ್ಲಿ ಗಣೇಶನ ವಿಗ್ರಹ ಇಟ್ಟು ಪೂಜಿಸುವವರಿಗೆ ಪ್ರತ್ಯೇಕ ಗೈಡ್ ಲೈನ್ಸ್ ಸಭೆಯಲ್ಲಿ ಹೊರಬೀಳಲಿದೆ.ಇನ್ನು ಪಾಸಿಟಿವಿಟಿ ರೇಟ್ ಜಾಸ್ತಿಯಿರುವ ಜಿಲ್ಲೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ಸಿಗುವುದು ಅನುಮಾನ. ಒಟ್ಟಿನಲ್ಲಿ ಇಂದು ಸಂಜೆ ಗಣೇಶನ ಹಬ್ಬದ ಕುರಿತ ಗೊಂದಲಕ್ಕೆ ತೆರೆ ಬೀಳಲಿದೆ.
Discussion about this post