ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೋನಾ ವೈರಸ್ ನ ಡೆಲ್ಟಾ ಪ್ರಬೇಧ ಇದೀಗ ವಿಶ್ವದ ಹಲವು ರಾಷ್ಟ್ರಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಚೀನಾವೂ ಹೊರತಾಗಿಲ್ಲ. ಚೀನದ 18 ಪ್ರಾಂತ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು. ಇದಕ್ಕೆ ಡೆಲ್ಟಾ ತಳಿಯೇ ಕಾರಣ ಅನ್ನುವುದು ದೃಢಪಟ್ಟಿದೆ.ಈ ನಡುವೆ ಸೋಂಕು ಏರುತ್ತಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದ್ದು, ಜನ ಹೇಗೇ ಬೇಕೋ ಹಾಗೇ ಓಡಾಡುವಂತಿಲ್ಲ.
ಬೀಜಿಂಗ್, ಜಿಯಾಂಗ್ಸು, ಸಿಚಾನ್ ಸೇರಿ 18 ಪ್ರಾಂತ್ಯಗಳಲ್ಲಿ ಕಳೆದ 10 ದಿನಗಳಿಂದ ಸೋಂಕಿನ ಪ್ರಮಾಣ ತೀವ್ರ ಏರಿಕೆಯಲ್ಲಿದೆ. 300ಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಮುಂಜಾಗ್ರತ ಕ್ರಮವಾಗಿ ಲಾಕ್ ಡೌನ್ ಗಳನ್ನು ಜಾರಿಗೊಳಿಸಲಾಗಿದೆ.
ಇನ್ನು ಸೋಂಕು ಹೆಚ್ಚಿರುವ ಪ್ರದೇಶದ ಜನ ಖಾಸಗಿ ವಾಹನ, ವಿಮಾನ, ರೈಲು ಮೂಲಕ ರಾಜಧಾನಿ ಬೀಜಿಂಗ್ ಪ್ರವೇಶಿಸಬಾರದು ಎಂದು ಆದೇಶಿಸಲಾಗಿದೆ.
ಮತ್ತೊಂದು ಕಡೆ ಅಮೆರಿಕಾದಲ್ಲೂ ಸೋಂಕಿನ ಪ್ರಮಾಣ ಏರಿಕೆಯಾಗಲಾರಂಭಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಂಕ್ರಾಮಿಕ ರೋಗ ತಜ್ಞ ಡಾ. ಫೌಸಿ, ಲಸಿಕೆ ಪಡೆಯದ ನಾಗರಿಕರು ವೈರಸ್ ತೀವ್ರವಾಗಿ ಹರಡಲು ಕಾರಣವಾಗುತ್ತಿದ್ದಾರೆ. ಇವರೇ ಇತರ ಜನರ ಮೇಲೆ ಪರಿಣಾಮ ಬೀರುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತಷ್ಟು ಕಠಿಣ ದಿನಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Discussion about this post