ಬೆಳ್ತಂಗಡಿ :ಮನೆಯಲ್ಲಿ ಹೊದ್ದು ಮಲಗಿದ ಬಡತನ, ಮನೆಯ ಕಡೆ ನೋಡಿದರೆ ಮೂರು ಹೊತ್ತು ತುತ್ತು ಸಿಕ್ಕರೆ ಸಾಕು ಅನ್ನುವ ಪರಿಸ್ಥಿತಿ.
ಆದರೆ ಈ ಎಲ್ಲಾ ಸಂಕಷ್ಟಗಳ ನಡುವೆಯೂ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ಶ್ರಮ ಮಗಳನ್ನು ಸಿವಿಲ್ ನ್ಯಾಯಾಧೀಶೆಯನ್ನಾಗಿ ಮಾಡಿದೆ. ನಾವು ಊಟ ಮಾಡದಿದ್ದರೂ ಪರವಾಗಿಲ್ಲ, ಮಕ್ಕಳನ್ನು ಓದಿಸಬೇಕು ಅನ್ನುವ ಪರಿಶ್ರಮ ಇದೀಗ ಫಲಕೊಟ್ಟಿದೆ.
ರಾಮಣ್ಣ ಪೂಜಾರಿಗೆ ಕೂಲಿ, ಸೀತಾ ಅವರು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು. ನಾರ್ಯದಲ್ಲಿ ಸಿಮೆಂಟ್ ಸೀಟಿನ ಚಿಕ್ಕ ಮನೆಯಲ್ಲಿ ಇವರ ಬದುಕು.
ಸಮಸ್ಯೆ, ಸಂಕಷ್ಟ ಅನ್ನುವುದು ಮನೆಯಲ್ಲಿ ಠಿಕಾಣಿ ಹೂಡಿದ್ದರು, ಒಂದಲ್ಲ ಒಂದು ದಿನ ಅದರ ವಿರುದ್ಧ ಗೆಲ್ಲುತ್ತೇವೆ ಅನ್ನುವುದು ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ವಿಶ್ವಾಸವಾಗಿತ್ತು.
ಹೀಗಾಗಿ ಕಷ್ಟಗಳು ಮನುಷ್ಯರಿಗಲ್ಲದೆ ಕಲ್ಲು ಮರಗಳಿಗೆ ಬರುತ್ತದೆಯೇ ಎಂದು ಯಾವುದಕ್ಕೂ ಎದೆಗುಂದದೇ ಮಕ್ಕಳು ನಮ್ಮಂತೆ ಅವಿದ್ಯಾವಂತರಾಗದೇ ವಿದ್ಯಾವಂತರಾಗಬೇಕು ಎಂದು ಪಣ ತೊಟ್ಟಿದ್ದರು.
ಹಗಲು ರಾತ್ರಿ ಅನ್ನದೇ ಬೀಡಿ ಸುತ್ತಿ ನಾಲ್ಕು ಕಾಸು ಸಂಪಾದಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ.
ಕರ್ನಾಟಕ ಉಚ್ಚ ನ್ಯಾಯಾಲಯದ 2020ನೇ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2021 ಫೆ.25ರಂದು ಹೊರಡಿಸಲಾದ ಅಧಿಸೂಚನೆಯಂತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಧರ್ಮಸ್ಥಳ ಗ್ರಾಮದ ನಾರ್ಯದ ಯುವತಿ ಚೇತನಾ ಆಯ್ಕೆಯಾಗಿದ್ದಾರೆ.
ಕಡುಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಚೇತನಾ ಇದೀಗ ಇಡೀ ನಾಡು ತಿರುಗಿ ನೋಡುವಂತ ಸಾಧನೆ ಮಾಡಿದ್ದಾರೆ.

1 ರಿಂದ 6ನೇ ತರಗತಿವರೆಗಿನ ಪ್ರಾಥಮಿಕ ಶಿಕ್ಷಣವನ್ನು ಪೆರ್ನೆ ಕನ್ನಡ ಮಾಧ್ಯಮ ಶಾಲೆ, ಏಳನೇ ತರಗತಿ ವಿದ್ಯಾಭ್ಯಾಸವನ್ನು ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಓದಿದ ಚೇತನಾ ಪ್ರೌಢ ಶಿಕ್ಷಣವನ್ನು ಧರ್ಮಸ್ಥಳ ಶ್ರೀ ಧರ್ಮಸ್ಥಳ.ಮಂಜುನಾಥ ಸೆಕೆಂಡರಿ ಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಡೆದಿದ್ದಾರೆ.
ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ ಚೇತನಾ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಆದರೆ ತಾಯಿಗೆ ಮಗಳು ಶಿಕ್ಷಣ ಮೊಟಕುಗೊಳಿಸಿ ಉದ್ಯೋಗ ಮಾಡೋದು ಇಷ್ಟವಿರಲಿಲ್ಲ.
ಮಕ್ಕಳನ್ನು ದೊಡ್ಡ ದೊಡ್ಡ ತರಗತಿ ತನಕ ಓದಿಸಬೇಕು ಎಂದು ಕನಸು ಕಂಡಿದ್ದ ಅವರು ಚೇತನಾಗೆ ಮತ್ತೆ ಶಿಕ್ಷಣ ಮುಂದುವರಿಸುವಂತೆ ಒತ್ತಾಯ ಮಾಡಿದರು.

ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಶಿಕ್ಷಣಕ್ಕೆ ಸೇರಿಸಿದರು.
ಎಲ್ ಎಲ್ ಬಿ ಮುಗಿಸಿ ಬಂದ ಚೇತನಾ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಬೆಳಾಲು ಅವರ ಕಚೇರಿಯಲ್ಲಿ ವಕೀಲ ವೃತ್ತಿ ಅರಂಭಿಸಿದರು.
ಬಳಿಕ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಕ್ಲಾರ್ಕ್ ರಿಸರ್ಚ್ ಅಸಿಸ್ಟೆಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಕಳೆದ ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.
ಇದೀಗ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಿವಿಲ್ ನ್ಯಾಯಾಧೀಶ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಮಗಳ ಈ ಸಾಧನೆಗೆ ಪೋಷಕರ ಪರಿಶ್ರಮ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾಕಂದ್ರೆ ದೊಡ್ಡ ಮಗ ರೂಪೇಶನಿಗೂ ಆತನ ಬಯಕೆಯಂತೆ ಐದು ವರ್ಷದ ಚಿತ್ರಕಲಾ ಪದವಿ ಮಾಡಿಸಿದ್ದಾರೆ. ಮೂರನೇ ಮಗ ಪುರಂದರ ಡಿಪ್ಲೋಮೋ ಮಾಡಿ ತಲಪಾಡಿಯಲ್ಲಿ ಉದ್ಯೋಗ ಮಾಡುತ್ತಿದ್ದಾನೆ, ಕೊನೆಯ ಮಗ ಭಾಗ್ಯೇಶ್ ಬೆಳ್ತಂಗಡಿ ಗುರುದೇವ ಕಾಲೇಜಿನಲ್ಲಿ ದ್ವಿತೀಯ ಪದವಿ ಕಲಿಯುತ್ತಿದ್ದಾನೆ.
ಒಟ್ಟಿನಲ್ಲಿ ಬಡ ದಂಪತಿಯ ಈ ಕಾರ್ಯ, ಮಕ್ಕಳ ಈ ಸಾಧನೆ ಲಕ್ಷಾಂತರ ಮಂದಿಗೆ ಪ್ರೇರಣೆ ಅನ್ನುವುದರಲ್ಲಿ ಎರಡು ಮಾತಿಲ್ಲ.
Discussion about this post