ಮಲೆನಾಡಿನ ಆರಾಧ್ಯ ದೇವತೆ ಹಾಗೂ ಕುಲದೇವತೆಯಾದ ಶ್ರೀ ಚಂದ್ರಗುತ್ತಿ ರೇಣುಕಾಂಬಾ ದೇವಿ ಸನ್ನಿದಾನ
ಮಲೆನಾಡಿನ ಜನರ ಪ್ರತಿ ಮನೆಯ ಅಧಿದೇವತೆಯಾಗಿರುವ ( Chandragutti Renukamba Temple ) ಚಂದ್ರಗುತ್ತಿಯ ಪ್ರಸಿದ್ಧ ರೇಣುಕಾ ದೇವಿ ಶ್ರೀ ಕ್ಷೇತ್ರ ಸರ್ವಾಂಗೀಣ ವಿಕಾಸಕ್ಕೆ ಸರ್ಕಾರದ ವತಿಯಿಂದ ಎಲ್ಲ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್. ಬಂಗಾರಪ್ಪ ಹೇಳಿದರು.
ಸೊರಬ ಸಮೀಪದ ಚಂದ್ರಗುತ್ತಿಯ ಶ್ರೀ ರೇಣುಕಾದೇವಿಯ ದರ್ಶನ ಪಡೆದ ನಂತರ ಅವರು ಶ್ರೀ ಕ್ಷೇತ್ರದ ಆಡಳಿತಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿದರು.
ಶ್ರೀ ಕ್ಷೇತ್ರದಲ್ಲಿನ ಸ್ವಚ್ಛತೆ, ಶೌಚಾಲಯ, ಶುದ್ಧ ಕುಡಿಯುವ ನೀರು, ವಸತಿ ಮತ್ತಿತರ ವಿಷಯಗಳ ಕುರಿತು ಸುಧೀರ್ಘ ಸಮಾಲೋಚನೆ ನಡೆಸಿದ ಅವರು ಯತ್ರಾರ್ತಿಗಳ ಅನುಕೂಲಕ್ಕಾಗಿ ತುರ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ ಸಂದರ್ಭದಲ್ಲಿ ಸ್ಥಿತವಾಗಿರುವ ಹಾಗೂ ಪಾರಂಪರಿಕವಾಗಿರುವ ಮೂಲ ಕಟ್ಟಡವು ಶಿಥಿಲಗೊಂಡಿದೆ ಮಾತ್ರವಲ್ಲದೆ ಮಳೆಯಿಂದ ಸೋರುತ್ತಿದೆ. ದೇವಸ್ಥಾನದ ಬಾಗಿಲುಗಳು ಸಡಿಲಗೊಂಡಿವೆ. ಅದರ ತುರ್ತು ಕಾರ್ಯವನ್ನು ಕೈಗೊಳ್ಳಲು ಭಾರತೀಯ ಪರಂಪರಿಕ ಕಟ್ಟಡಗಳ ನಿರ್ವಹಣಾ ಸಮಿತಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಮಾತ್ರವಲ್ಲದೆ ಕೈಗೊಳ್ಳಬಹುದಾದ ತುರ್ತು ಕಾಮಗಾರಿಗಳಿಗೆ ಆರ್ಥಿಕ ನೆರವನ್ನು ಸರ್ಕಾರ ಅಥವಾ ಸ್ಥಳೀಯ ಆಡಳಿತ ಅಧಿಕಾರಿಗಳ ಕಚೇರಿಯಿಂದ ಒದಗಿಸಿಕೊಡಲಾಗುವುದು ಎಂದವರು ನುಡಿದರು.