ಬೆಂಗಳೂರು : ನಗರದಲ್ಲಿ ಜೂಜು ಅಡ್ಡೆ ಕಟ್ಟಿಕೊಂಡು ಗ್ಯಾಂಬ್ಲಿಂಗ್ ದಂಧೆ ನಡೆಸುತ್ತಿದ್ದ ಉದ್ಯಮಿ ಹರಿರಾಜ್ ಶೆಟ್ಟಿ ಸೇರಿದಂತೆ 42 ಮಂದಿ ಗ್ಯಾಂಬ್ಲರ್ ಗಳ ವಿರುದ್ಧ ಸಿಸಿಬಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ 250 ಪುಟದ ಜಾರ್ಜ್ ಶೀಟ್ ನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಗ್ಯಾಂಬ್ಲಿಂಗ್, ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಕನ್ನಿಂಗ್ ಹ್ಯಾನ್ ರಸ್ತೆಯಲ್ಲಿ ಕ್ಲಬ್ ನಡೆಸುತ್ತಿದ್ದ ಹರಿರಾಜ್ ಶೆಟ್ಟಿ ಜೂಜು ಅಡ್ಡೆ ನಡೆಸುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಕೋರ್ಟ್ ಅನುಮತಿ ಪಡೆದು ದಾಳಿ ನಡೆಸಿದ್ದರು. ಆಗ ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯದ ಗ್ಯಾಂಬ್ಲರ್ ಗಳ ಜಾಡು ಸಿಕ್ಕಿತ್ತು.
ಹರಿರಾಜ್ ವಿರುದ್ಧ ಕೋರಮಂಗಲ, ಕಬ್ಬನ್ ಪಾರ್ಕ್, ಅಶೋಕನಗರ ಮತ್ತು ಬಸವೇಶ್ವರ ನಗರ ಸೇರಿ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಜೂನ್ 5 ರಂದು ದಾಳಿ ನಡೆಸಿದ್ದ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದರು. ಇದಾದ ಬಳಿಕ ಕೋರ್ಟ್ ಮೆಟ್ಟಿಲೇರಿದ್ದ ಶೆಟ್ಟಿ, ಪೊಲೀಸರು ನನ್ನ ಬಳಿ ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಕೋರ್ಟ್ ನಲ್ಲಿ ಸ್ಟೇ ಸಿಕ್ಕಿತ್ತು. ಹೀಗಾಗಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಇದಾದ ಬಳಿಕ ಗೂಂಡಾ ಕಾಯ್ದೆ ತಡೆ ತೆರವಿಗೆ ಸಿಸಿಬಿ ಮನವಿ ಮಾಡಿತ್ತು. ಈ ಅರ್ಜಿಯನ್ನು ಪುರಸ್ಕರಿಸಿದ್ದ ನ್ಯಾಯಾಲಯ ವಿಚಾರಣೆ ಅನುಮತಿ ನೀಡಿತ್ತು. ಹೀಗಾಗಿ ಮತ್ತೆ ಪೊಲೀಸರು ಬಂಧಿಸಿದ್ದರು. ಇನ್ನು ಹರಿರಾಜ್ ಶೆಟ್ಟಿ ಕೆಲ ವರ್ಷಗಳ ಹಿಂದೆ ತೆರೆ ಕಂಡಿದ್ದ ಮುಂಗಾರು ಮಳೆ2 ಚಿತ್ರದ ನಾಯಕಿ ನೇಹಾ ಶೆಟ್ಟಿ ತಂದೆ ಎಂದು ಗೊತ್ತಾಗಿದೆ.
Discussion about this post