ಶಾಸಕರ ಅಧಿಕಾರ ಮೊಟಕುಗೊಳಿಸಿದ್ದಾರೆ ಗುರುರಾಜ್ ಗಂಟಿಹೊಳೆ ಆರೋಪ
ಶಾಸಕರ ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ತರುತ್ತಿದೆ ಎಂದು ಆರೋಪಿಸಿ ಬೈಂದೂರು ಶಾಸಕ ( Gururaj gantihole ) ಗುರುರಾಜ ಗಂಟಿಹೊಳೆ ಸೋಮವಾರ ಸಂಜೆಯಿಂದ ಬೈಂದೂರು ತಾಲೂಕು ಆಡಳಿತ ಕಟ್ಟಡದ ಎದುರು ದಿಢೀರ್ ಆಹೋರಾತ್ರಿ ಧರಣಿ ಪ್ರಾರಂಭಿಸಿದ್ದಾರೆ.
ಶಾಸಕ ಗುರುರಾಜ್ ಅವರು ಜನರ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಅಧಿಕಾರಿಗಳು ಈ ಸಭೆಗೆ ಗೈರು ಹಾಜರಾಗಿದ್ದರು. ಜಿಲ್ಲಾಧಿಕಾರಿಗಳು ಕರೆ ಮಾಡಿ ಸಭೆಗಳಿಗೆ ಹೋಗದಂತೆ ಸೂಚಿಸಿದ ಹಿನ್ನಲೆಯಲ್ಲಿ ಅಧಿಕಾರಿಗಳು ಸಭೆಗೆಯನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬೆಳವಣಿಗೆಯಿಂದ ಕೋಪಗೊಂಡ ಶಾಸಕರು ಜಿಲ್ಲಾಡಳಿತ ವಿರುದ್ಧವೇ ಬೈಂದೂರು ತಾಲೂಕು ಕಚೇರಿ ಕಟ್ಟಡದ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ಪ್ರಾರಂಭಿಸಿದ್ದಾರೆ.
ಜನ ಕರೆದಲ್ಲಿಗೆ ನಾನು ಹೋಗಬೇಕು, ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು, ಹಿಂದೆಲ್ಲಾ ಶಾಸಕರ ಮನೆಗಳಲ್ಲಿ ಅಧಿಕಾರಿಗಳ ಸಭೆಗಳಾಗಿತ್ತು, ಅಧಿಕಾರಿಗಳು, ಜನಪ್ರತಿನಿಧಿಗಳು ಇರೋದು ಜನಸೇವೆಗೆ. ಸರ್ಕಾರ ಕೊಟ್ಟ ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿ ದರ್ಬಾರು ನಡೆಸುವ ವ್ಯಕ್ತಿ ನಾನಲ್ಲ.
ಜನರ ಅನುಕೂಲದ ದೃಷ್ಟಿಯಿಂದಲೇ, ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಾರ್ಯಕರ್ತ ಹೆಸರಿನ ಕಚೇರಿ ತೆರೆಯಲಾಗಿದೆ. ಈ ಕಚೇರಿಗಳಲ್ಲಿ ನಡೆಯೋ ಸಭೆಗಳಿಗೆ ಅಧಿಕಾರಿಗಳು ಹೋಗಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿರುವುದು ಯಾಕೆ ಎಂದು ಗಂಟಿಹೊಳೆ ಪ್ರಶ್ನಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದಿಂದ ಸ್ಪಷ್ಟನೆ ಸಿಗದ ಹೊರತು ವಿರಮಿಸುವ ಮಾತೇ ಇಲ್ಲ ಅಂದಿದ್ದಾರೆ.